ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ, ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮ್‌ಗೂಲಂ ಅವರೊಂದಿಗೆ ಇಂದು ಇಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಲ್ಲಿಗೆ ಬಂದಿಳಿಯಲಿರುವ ಪ್ರಧಾನಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಲಿದ್ದಾರೆ. ವಿಶೇಷವಾಗಿ ಅಭಿವೃದ್ಧಿ ಪಾಲುದಾರಿಕೆ ಮತ್ತು ಸಾಮರ್ಥ್ಯ ವೃದ್ಧಿಯ ಕುರಿತು ಪ್ರಧಾನಿ ಮೋದಿ ಮತ್ತು ರಾಮ್‌ಗೂಲಂ ನಿರ್ಣಾಯಕ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅವರು, ಆರೋಗ್ಯ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಶಕ್ತಿ ಹಾಗೂ ಮೂಲ ಸೌಕರ್ಯ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಾಗಿರುವ ನವೀಕರಿಸಬಹುದಾದ ಶಕ್ತಿ, ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಮತ್ತು ನೀಲಿ ಆರ್ಥಿಕತೆ ಕುರಿತು ಸಹಕಾರ ವಿಸ್ತರಣೆಯ ಅವಕಾಶಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2025ರ ಮಾರ್ಚ್ನಲ್ಲಿ ಮಾರಿಷಸ್ಗೆ ಭೇಟಿ ನೀಡಿದ್ದರು. ಈ ವೇಳೆ, ಉಂಟಾದ ಸಕಾರಾತ್ಮಕತೆ ಮೇಲೆ ಈ ಭೇಟಿ ಕೈಗೊಳ್ಳಲಾಗಿದೆ. ಇಬ್ಬರು ನಾಯಕರು ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯೊಂದಿಗೆ ವೃದ್ಧಿಸಲು ಚರ್ಚಿಸಲಿದ್ದಾರೆ. ರಾಮ್‌ಗೂಲಂ ಬುಧವಾರವೇ ವಾರಾಣಸಿಗೆ ಬಂದಿಳಿದಿದ್ದು, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಮತ್ತು ಹಣಕಾಸು ಸಚಿವ ಸುರೇಶ್ ಖನ್ನಾ ಅವರನ್ನು ಸ್ವಾಗತಿಸಿದ್ದರು. ರಾಮ್‌ಗೂಲಂ ಸೆಪ್ಟೆಂಬರ್ 16ರವರೆಗೆ ಭಾರತ ಪ್ರವಾಸದಲ್ಲಿರಲಿದ್ದಾರೆ. ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ಹೊರತಾಗಿ ರಾಮ್‌ಗೂಲಂ ಇಂದು ಸಂಜೆ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿಂದ ಹೊರಡುವ ಮುನ್ನ ಶುಕ್ರವಾರ ಮುಂಜಾನೆ ಕಾಶಿ ವಿಶ್ವನಾಥನ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.