image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೇಪಾಳದಲ್ಲಿ ಭಾರೀ ಸಂಘರ್ಷದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ತೆರವು

ನೇಪಾಳದಲ್ಲಿ ಭಾರೀ ಸಂಘರ್ಷದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ತೆರವು

ಕಠ್ಮಂಡು: ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸಿರುವ ತನ್ನ ಕ್ರಮವನ್ನು ಇದೀಗ ನೇಪಾಳ ಸರ್ಕಾರ ಹಿಂತೆಗೆದುಕೊಂಡಿದೆ. ಸರ್ಕಾರ ವಿಧಿಸಿದ ನಿಷೇಧ ಕ್ರಮದ ವಿರುದ್ಧ ಜೆನ್ ಝೆಡ್ (ಯುವಜನತೆ) ಬೀದಿಗಿಳಿದು ಪ್ರತಿಭಟಿಸಿದ್ದು, ಫಲ ನೀಡಿದೆ. ಪೊಲೀಸರು ಮತ್ತು ಜನರ ನಡುವಿನ ಸಂಘರ್ಷದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಂಭೀರ ಪರಿಸ್ಥಿತಿಯ ನಡುವೆ ಗೃಹ ಸಚಿವ ರಮೇಶ್ ಲೇಖಕ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನೇಪಾಳಿ ಸೇನೆಯನ್ನು ರಾಜಧಾನಿ ಕಠ್ಮಂಡುವಿನಲ್ಲಿ ನಿಯೋಜಿಸಲಾಗಿತ್ತು. ನ್ಯೂ ಬನೇಶ್ವರ್‌ನಲ್ಲಿರುವ ಸಂಸತ್ ಸಂಕೀರ್ಣದ ಸುತ್ತಲಿನ ರಸ್ತೆಗಳನ್ನು ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಜನರ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಶಾಂತಿಯುತ ಪ್ರತಿಭಟನೆಯಲ್ಲಿ ಕೆಲವು ಅನಗತ್ಯ ವಿಚಾರಗಳ ಮಧ್ಯಪ್ರವೇಶ ಆಗಿತ್ತು. ಈ ಬೆಳವಣಿಗೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವುದನ್ನು ತಡೆಯಲು ಸರ್ಕಾರ ಬಲವಂತವಾಗಿ ಕ್ರಮ ಕೈಗೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ಉದ್ದೇಶ ಇರಲಿಲ್ಲ. ಆದರೆ ಅವುಗಳನ್ನು ನಿಯಂತ್ರಿಸುವ ಗುರಿ ಇತ್ತಷ್ಟೇ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ಘಟನಾವಳಿಗಳ ಕುರಿತು ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿ ತನಿಖಾ ಸಮಿತಿ ರಚಿಸಲಾಗುವುದು ಎಂದು ಪ್ರಧಾನಿ ಓಲಿ ಘೋಷಿಸಿದ್ದಾರೆ. ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವರಾದ ಪೃಥ್ವಿ ಸುಬ್ಬಾ ಗುರುಂಗ್ ಅವರು ತುರ್ತು ಸಚಿವ ಸಂಪುಟ ಸಭೆಯ ನಂತರ ಸರ್ಕಾರ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ತನ್ನ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಪ್ರಕಟಿಸಿದ್ದಾರೆ. ಸಂಸತ್ ಕಟ್ಟಡದ ಎದುರು ಬೃಹತ್ ಪ್ರತಿಭಟನೆ ನಡೆಸುತ್ತಿರುವ 'ಜೆನ್ ಝಡ್'(ಯುವಜನತೆ)ಬೇಡಿಕೆಗಳಂತೆ, ಸಾಮಾಜಿಕ ಮಾಧ್ಯಮ ತಾಣಗಳನ್ನು ಪುನರಾರಂಭಿಸುವ ಪ್ರಕ್ರಿಯೆ ಪ್ರಾರಂಭಿಸಲು ಮಾಹಿತಿ ಸಚಿವಾಲಯ ಸಂಬಂಧಪಟ್ಟ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಗುರುಂಗ್ ಹೇಳಿದ್ದಾರೆ. ಹೀಗಾಗಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆಯೂ ಸಚಿವರು ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ, ಜೆನ್ ಝಡ್ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಯುವಕರು ಕಠ್ಮಂಡುವಿನ ಹೃದಯಭಾಗದಲ್ಲಿರುವ ಸಂಸತ್ತಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ನಿಷೇಧ ಕ್ರಮವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಸಂಸತ್ ಸಂಕೀರ್ಣ ಪ್ರವೇಶಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಹಿಂಸೆಗೆ ತಿರುಗಿತು. ಪೊಲೀಸರು ಜನರ ಗುಂಪುಗಳನ್ನು ಚದುರಿಸಲು ಜಲಫಿರಂಗಿ, ಅಶ್ರುವಾಯು ಮತ್ತು ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

Category
ಕರಾವಳಿ ತರಂಗಿಣಿ