ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕ್ಷೇತ್ರ ಹಂಚಿಕೆಗೂ ಮೊದಲೇ ಬಿಹಾರ ಸಿಎಂ ನಿತೀಶ್ ಕುಮಾರ್, ಮಿತ್ರಪಕ್ಷವಾದ ಬಿಜೆಪಿಗೆ ಸಣ್ಣದಾದ ಶಾಕ್ ನೀಡಿದೆ. ನಿತೀಶ್ ಕುಮಾರ್ ಅವರದ್ದು ಏಕಪಕ್ಷೀಯ ನಿರ್ಧಾರ ಎಂಬ ಮಾತುಗಳು ಬಿಹಾರ ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ. ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ-ಜೆಡಿಯು (ಎನ್‌ಡಿಎ) ಜೊತೆಯಾಗಿ ಎದುರಿಸಲಿವೆ. ಈ ಹಿನ್ನೆಲೆ ಕ್ಷೇತ್ರವಾರು ಹಂಚಿಕೆಯ ರಾಜಕೀಯ ತೀವ್ರಗೊಂಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಜೆಡಿಯು ರಾಜ್‌ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ. ಎನ್‌ಡಿಎ ಮಿತ್ರಪಕ್ಷಗಳ ನಡುವಿನ ಔಪಚಾರಿಕ ಮಾತುಕತೆಗೂ ಮುನ್ನವೇ ಈ ಘೋಷಣೆಯಾಗಿರೋದು ಹಲವು ಹೊಸ ಚರ್ಚೆಗಳಿಗೆ ನಾಂದಿಯಾಗಿದೆ. ಬಕ್ಸಾರ್ ಕ್ಷೇತ್ರದ ಸಭೆಯೊಂದರಲ್ಲಿ ಜೆಡಿಯು ಮುಖ್ಯಸ್ಥ, ಸಿಎಂ ನಿತೀಶ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ರಾಜ್‌ಪುರ ವಿಧನಾಸಭಾ ಕ್ಷೇತ್ರದಿಂದ ಮಾಜಿ ಸಚಿವ ಸಂತೋಷ್ ಕುಮಾರ್ ನಿರಾಲಾ ಸ್ಪರ್ಧೆ ಮಾಡಲಿದ್ದಾರೆ ಎಂದು ಘೋಷಿಸಿ, ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕೆಂದು ನಿತೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ರಾಜ್‌ಪುರ ಮೀಸಲು (ಎಸ್‌ಸಿ) ವಿಧಾನಸಭಾ ಕ್ಷೇತ್ರವಾಗಿದೆ. ಕ್ಷೇತ್ರ ಹಂಚಿಕೆಗೂ ಮುನ್ನವೇ ನಿತೀಶ್ ಕುಮಾರ್ ಅವರ ಘೋಷಣೆ ಬಿಹಾರ ರಾಜಕೀಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಮಾಜಿ ಸಚಿವರಾಗಿರುವ ಸಂತೋಷ್ ಕುಮಾರ್ ನಿರಾಲಾ, 2020 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಶ್ವನಾಥ್ ರಾಮ್ ವಿರುದ್ಧ ಸೋತಿದ್ದರು. ಇದಕ್ಕೂ ಮೊದಲು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜ್‌ಪುರ ವಿಧನಾಸಭಾ ಕ್ಷೇತ್ರದ ಜೆಡಿಯು ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಸಂಂತೋಷ್ ಕುಮಾರ್ ನಿರಾಲಾ ಗುರುತಿಸಿಕೊಂಡಿದ್ದಾರೆ. ಸಂತೋಷ್ ಕುಮಾರ್ ನಿರಾಲಾ ಹೆಸರು ಘೋಷಣೆ ಬಳಿಕ ಮಾತನಾಡಿದ ಸಿಎಂ ನಿತೀಶ್ ಕುಮಾರ್, ನಾವು ಬಿಹಾರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಈಗ ಚುನಾವಣೆಯಲ್ಲಿ ನೀವು ನಮ್ಮನ್ನು ಬೆಂಬಲಿಸಬೇಕು. ಸಂತೋಷ್ ಕುಮಾರ್ ನಿರಾಲಾ ಅವರು ರಾಜ್‌ಪುರ ವಿಧನಾಸಭಾ ಕ್ಷೇತ್ರದ ಜೆಡಿಯು ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕಿದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಿತೀಶ್ ಕುಮಾರ್ ಈ ನಿರ್ಧಾರವನ್ನು ಎನ್‌ಡಿಎ ಮಿತ್ರಪಕ್ಷಗಳಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ರಾಜ್‌ಪುರ ಕ್ಷೇತ್ರ ಬಿಜೆಪಿ-ಜೆಡಿಯುನ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ಜೆಡಿಯು ಅತ್ಯಧಿಕ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಈ ಹಿನ್ನೆಲೆ ಮೈತ್ರಿ ಒಪ್ಪಂದಕ್ಕೂ ಮೊದಲೇ ನಿತೀಶ್ ಕುಮಾರ್ ಈ ಘೋಷಣೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಜೆಡಿಯು ಪಕ್ಷದ ಈ ಘೋಷಣೆ ರಾಜಕೀಯ ಗೊಂದಲಗಳನ್ನು ಹೆಚ್ಚಿಸಿರೋದು ನಿಜ. ರಾಜ್‌ಪುರ ಅವರದ್ದೇ ಕ್ಷೇತ್ರವಾಗಿರೋದರಿಂದ ನಿತೀಶ್ ಕುಮಾರ್ ಈ ಘೋಷಣೆ ಮಾಡಿರಬಹುದು. ಔಪಚಾರಿಕ ಸೀಟು ಹಂಚಿಕೆ ಕುರಿತು ಮಾತುಕತೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಜೆಪಿ ವಕ್ತಾರ ಮನೋಜ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಸಂತೋಷ್ ಕುಮಾರ್ ನಿರಾಲಾ ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಿರಾಲಾ ಅವರು ಈ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಾಯಕರಾಗಿದ್ದಾರೆ. ಅವರ ಘೋಷಣೆ ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ. ರಾಜ್‌ಪುರದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವಾಗ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ. ಈ ಸಮಯದಲ್ಲಿ ಉಮೇದಾರರ ಹೆಸರು ಘೋಷಿಸೋದು ಸೂಕ್ತವೆಂದು ಸಿಎಂ ಭಾವಿಸಿರಬಹುದು ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳುತ್ತಾರೆ.