ಟೆಲ್ ಅವಿವ್ : ಗಾಝಾ ನಗರದ ಜನನಿಬಿಡ ಪ್ರದೇಶದಲ್ಲಿರುವ 12 ಅಂತಸ್ತಿನ 'ಮುಷ್ತಾಹ ಟವರ್' ಕಟ್ಟಡವನ್ನು ಇಸ್ರೇಲ್ ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಗಾಝಾದಲ್ಲಿ ನರಕದ ಬಾಗಿಲು ಈಗ ತೆರೆದಿದೆ ಎಂದು ಇಸ್ರೇಲ್ ನ ರಕ್ಷಣಾ ಸಚಿವಾಲಯ ಘೋಷಿಸಿದೆ. ಬಹುಮಹಡಿ ಕಟ್ಟಡದ ಮೇಲಿನ ದಾಳಿಯಲ್ಲಿ ಹಲವಾರು ನಾಗರಿಕರ ಸಾವು-ನೋವು ಸಂಭವಿಸಿದೆ. ಗಾಝಾ ನಗರವನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಹುಮಹಡಿ ಕಟ್ಟಡಗಳನ್ನು ಗುರಿಯಾಗಿಸುವುದಾಗಿ ಇಸ್ರೇಲ್ ಮಿಲಿಟರಿ ಇದಕ್ಕೂ ಮುನ್ನ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಗಾಝಾ ನಗರದಲ್ಲಿ ದಾಳಿಗೆ ಗುರಿಯಾದ ಬಹುಮಹಡಿ ಕಟ್ಟಡ ಹಮಾಸ್ ನ ನೆಲೆಯನ್ನು ಒಳಗೊಂಡಿತ್ತು ಮತ್ತು ಇಸ್ರೇಲ್ ಪಡೆಗಳ ವಿರುದ್ಧ ಕಾರ್ಯಾಚರಣೆಯನ್ನು ಯೋಜಿಸಲು ಮತ್ತು ನಡೆಸಲು ಬಳಸಲಾಗುತ್ತಿತ್ತು ಎಂದು ಇಸ್ರೇಲ್ ಮಿಲಿಟರಿ ಪ್ರತಿಪಾದಿಸಿದೆ.
ಗಾಝಾ ನಗರದಲ್ಲಿ ಮಿಲಿಟರಿ ದಾಳಿ ನಡೆಸಿದ ಬಹುಮಹಡಿ ಕಟ್ಟಡವನ್ನು ಹಮಾಸ್ ಬಳಸುತ್ತಿತ್ತು. ಇಲ್ಲಿ ಇಸ್ರೇಲ್ ಪಡೆಗಳ ವಿರುದ್ಧದ ದಾಳಿಯನ್ನು ಯೋಜಿಸಲಾಗುತ್ತಿತ್ತು. ಕಟ್ಟಡದ ಕೆಳಗಿದ್ದ ಭೂಗತ ರಚನೆಯು ಹಮಾಸ್ ಹೋರಾಟಗಾರರು ಹೊಂಚು ದಾಳಿ ನಡೆಸಿದ ಬಳಿಕ ತಪ್ಪಿಸಿಕೊಳ್ಳುವ ಮಾರ್ಗವಾಗಿತ್ತು. ದಾಳಿಗೆ ಮುಂಚಿತವಾಗಿ ನಾಗರಿಕರ ಸಾವು-ನೋವುಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಅವಿಚೇ ಆಡ್ರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಲವಂತದ ಸ್ಥಳಾಂತರಕ್ಕೆ ಆದೇಶ ನೀಡಿದ ಕೇವಲ 15 ನಿಮಿಷಗಳಲ್ಲಿ ದಾಳಿ ನಡೆದಿದೆ ಮತ್ತು ಕಟ್ಟಡವು ಗಾಝಾ ನಗರದ ಜನನಿಬಿಡ ಪ್ರದೇಶದಲ್ಲಿತ್ತು ಎಂದು ಅಲ್ ಜಝೀರಾ ವರದಿ ಮಾಡಿದೆ.