ಮುಂಬೈ: ವಾಣಿಜ್ಯ ನಗರಿ ಮುಂಬೈನ ವಿವಿಧೆಡೆ 400 ಕೆಜಿ ಆರ್ ಡಿಎಕ್ಸ್ ನೊಂದಿಗೆ 34 ಮಾನವ ಬಾಂಬರ್ ಗಳು ಪ್ರವೇಶಿಸಿದ್ದಾರೆಂಬ ಬೆದರಿಕೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಪ್ರಬಲ ಸ್ಫೋಟದಿಂದ ಇಡೀ ನಗರವೇ ಅಲ್ಲೋಲಕಲ್ಲೋಲವಾಗಲಿದೆ ಎಂಬ ಎಚ್ಚರಿಕೆ ನೀಡಿರುವುದಾಗಿ ವರದಿ ವಿವರಿಸಿದೆ. ಅನಂತ ಚತುರ್ದಶಿ ಮುನ್ನಾ ದಿನ ಲಷ್ಕರ್ ಇ ಜಿಹಾದಿ ಎಂಬ ಸಂಘಟನೆ ಈ ಬೆದರಿಕೆ ಸಂದೇಶ ಕಳುಹಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
"34 ವಾಹನಗಳಲ್ಲಿ 400 ಕೆಜಿ ಆರ್ ಡಿಎಕ್ಸ್ ನೊಂದಿಗೆ ಮಾನವ ಬಾಂಬರ್ ಗಳು ಸ್ಫೋಟ ನಡೆಸಲು ಸಿದ್ಧತೆ ನಡೆಸಿರುವುದಾಗಿ" ಬೆದರಿಕೆ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಮುಂಬೈ ನಗರಿಗೆ ಈ ರೀತಿಯ ಬಾಂಬ್ ಬೆದರಿಕೆ ಸಂದೇಶ ಬರುತ್ತಿರುವುದು ಇದೇ ಮೊದಲಲ್ಲ, ಜುಲೈ 26ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಗೂ ಬಾಂಬ್ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬಂದಿಗಳು ಶೋಧ ಕಾರ್ಯ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಪತ್ತೆಯಾಗಿತ್ತು. ಜುಲೈ 22ರಂದು ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇಂತಹದ್ದೇ ಹುಸಿ ಬಾಂಬ್ ಬೆದರಿಕೆ ಸಂದೇಶವನ್ನು ಇ-ಮೇಲ್ ಮೂಲಕ ಕಳುಹಿಸಲಾಗಿತ್ತು ಎಂದು ವರದಿ ತಿಳಿಸಿದೆ.