ನವದೆಹಲಿ: ಜಿಎಸ್ಟಿ ಮಂಡಳಿಯು ಅನುಮೋದಿಸಿದ ಜಿಎಸ್ಟಿ ಸುಧಾರಣೆಗಳು ನಾಗರಿಕರ ಜೀವನವನ್ನು ಸುಧಾರಿಸುತ್ತದೆ ಮತ್ತು ಎಲ್ಲರಿಗೂ ಅನುಕೂಲ ಮಾಡಿಕೊಡಲಿದೆ ಎಂದು ಪ್ರಧಾನಿ ಮೋದಿ ಬುಧವಾರ ಹೇಳಿದ್ದಾರೆ. ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ವ್ಯವಹಾರಗಳಿಗೆ ವ್ಯಾಪಾರ ಮಾಡುವ ಸುಲಭತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್ ಟಿ ಕಡಿತದ ಬಗ್ಗೆ ಸುದ್ದಿಗೋಷ್ಠಿ ಮಾಡಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅತ್ತ X ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿಗಳು, ಸಾಮಾನ್ಯ ಜನರಿಗೆ ಸುಲಭ ಜೀವನ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಜಿಎಸ್ ಟಿ ಸುಧಾರಣೆಗಳು ಹೊಂದಿವೆ. ವಿಶಾಲ ಆಧಾರಿತ ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಪ್ರಕ್ರಿಯೆಯ ಸುಧಾರಣೆಗಳಿಗಾಗಿ ಕೇಂದ್ರ ಸರ್ಕಾರವು ವಿವರವಾದ ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್ಟಿ ಮಂಡಳಿ ಸಭೆಯು, ಸಾಮಾನ್ಯ ಜನರು, ರೈತರು, ಎಂಎಸ್ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನ ನೀಡುವ ಜಿಎಸ್ಟಿ ದರ ಕಡಿತ ಮತ್ತು ಸುಧಾರಣೆಗಳಿಗೆ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗಳಿಗೆ ಎಲ್ಲ ರಾಜ್ಯಗಳು ಯಾವುದೇ ವಿರೋಧ ಇಲ್ಲದೇ ಸಾಮೂಹಿಕವಾಗಿ ಒಪ್ಪಿಗೆ ನೀಡಿದೆ ಎಂದು ಹೇಳಲು ತಮಗೆ ಸಂತಸವಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಜಿಎಸ್ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ತಮ್ಮ ಸರ್ಕಾರದ ಉದ್ದೇಶದ ಬಗ್ಗೆ ಮಾತನಾಡಿದ್ದೆ ಎಂಬುದನ್ನು ಇದೇ ವೇಳೆ ಮೋದಿ ನೆನಪಿಸಿದರು. ಶೇ 5 ಮತ್ತು 18 ಪ್ರತಿಶತದ ಎರಡು ಸ್ಲ್ಯಾಬ್ ಗಳಿಗೆ ಜಿಎಸ್ ಟಿ ಕೌನ್ಸಿಲ್ ಬುಧವಾರ ಅನುಮೋದನೆ ನೀಡಿದೆ. ಇದು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ. ಜಿಎಸ್ಟಿ ಕಡಿತ ಮಾಡುವ ಸರ್ಕಾರ ನಿರ್ಧಾರದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದಾರೆ. ಜಿಎಸ್ಟಿ ದರ ಕಡಿತದ "ಐತಿಹಾಸಿಕ" ನಿರ್ಧಾರವು ಜನರು ಮತ್ತು ಮಧ್ಯಮ ವರ್ಗಕ್ಕೆ ದೊಡ್ಡ ಪರಿಹಾರ ತರುತ್ತದೆ ಎಂದು ಹೇಳಿದ್ದಾರೆ.