ನ್ಯೂಯಾರ್ಕ್: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕ ಸುಂಕ ಹೇರಿದ್ದಕ್ಕೆ ಅಮೆರಿಕನ್ನರಿಂದಲೇ ವಿರೋಧ ವ್ಯಕ್ತವಾಗಿದೆ. ಟ್ರಂಪ್ರ ವೈಯಕ್ತಿಕ ಹಿತಾಸಕ್ತಿ ಮತ್ತು ಅಹಂಕಾರದಿಂದ ಭಾರತದ ಜೊತೆಗಿನ ಸಂಬಂಧ ಹಾಳಾಗುತ್ತಿದೆ ಎಂದು ಅಲ್ಲಿನ ಮಾಜಿ ಅಧಿಕಾರಿಗಳು ಮತ್ತು ಸೆನೆಟರ್ ಕಿಡಿಕಾರಿದ್ದಾರೆ. ಅಮೆರಿಕ -ಭಾರತ ಕೂಟದ ಸಹ ಅಧ್ಯಕ್ಷ, ಭಾರತೀಯ ಅಮೆರಿಕನ್ ಸೆನೆಟರ್ ರೋ ಖನ್ನಾ ಅವರು ಟ್ರಂಪ್ ವಿರುದ್ಧ ಸೆಟೆದು ನಿಂತಿದ್ದಾರೆ. ಅಮೆರಿಕ - ಭಾರತ ಸಂಬಂಧವನ್ನು ನಾಶಮಾಡಲು ಟ್ರಂಪ್ ಯತ್ನಿಸುತ್ತಿದ್ದಾರೆ. 30 ವರ್ಷಗಳ ದ್ವಿಪಕ್ಷೀಯ ನಂಟನ್ನು ದುರ್ಬಲಗೊಳಿಸುತ್ತಿದ್ದಾರೆ. ಇದರಿಂದ ಭಾರತ ಚೀನಾ ಮತ್ತು ರಷ್ಯಾದ ಕಡೆಗೆ ವಾಲುವಂತೆ ಮಾಡುತ್ತಿದ್ದಾರೆ. ಇದು ಅಮೆರಿಕಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಲಿದೆ ಎಂದು ಹೇಳಿದ್ದಾರೆ. ಭಾರತದ ಮೇಲೆ ವಿಧಿಸಲಾದ ಸುಂಕಗಳು ಬ್ರೆಜಿಲ್ ಹೊರತುಪಡಿಸಿ, ಬೇರೆ ಯಾವುದೇ ದೇಶಗಳಿಗಿಂತ ಹೆಚ್ಚಾಗಿದೆ. ರಷ್ಯಾದ ಇಂಧನದ ಅತಿದೊಡ್ಡ ಖರೀದಿದಾರ ಚೀನಾದ ಮೇಲಿನ ಸುಂಕಗಳಿಗಿಂತಲೂ ಹೆಚ್ಚಿನ ಸುಂಕಗಳಾಗಿವೆ. ಇದು ಭಾರತದ ಚರ್ಮ ಮತ್ತು ಜವಳಿ ಉದ್ಯಮದ ರಫ್ತಿನ ಮೇಲೆ ಪರಿಣಾಮ ಬೀರುತ್ತಿದೆ. ಅಮೆರಿಕದಿಂದ ರಫ್ತಾಗುವ ವಸ್ತುಗಳ ಮೇಲೂ ಪರಿಣಾಮ ಉಂಟು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜೊತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟಾಗಿದ್ದಕ್ಕೆ ಮತ್ತೊಂದು ಕಾರಣ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರಾಕರಿಸಿದರು. ಆದರೆ, ಪಾಕಿಸ್ತಾನವು ಟ್ರಂಪ್ರಿಗೆ ಬೆಂಬಲ ನೀಡಿತು. ಇದು ಟ್ರಂಪ್ ಭಾರತದ ವಿರುದ್ಧ ಸುಂಕ ಸಮತ ಹೇರಲು ಕಾರಣ ಎಂದು ವಿವರಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಾವು ಕೊನೆಗೊಳಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಇದನ್ನು ಭಾರತ ನಿರಾಕರಿಸಿತು. ಆದರೆ, ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಟ್ರಂಪ್‌ಗೆ ಧನ್ಯವಾದ ಹೇಳಿತು. ಪಾಕಿಸ್ತಾನದೊಂದಿಗಿನ ಗಡಿ ವಿವಾದವು ಆಂತರಿಕ ವಿಷಯವಾಗಿದೆ ಎಂದು ಭಾರತ ಹೇಳುವ ಮೂಲಕ ಟ್ರಂಪ್‌ಗೆ ಯಾವುದೇ ಕ್ರೆಡಿಟ್ ನೀಡಲು ನಿರಾಕರಿಸಿತು ಎಂದರು. "ಡೊನಾಲ್ಡ್ ಟ್ರಂಪ್ ಅವರ ಅಹಂಕಾರವು ಭಾರತದೊಂದಿಗಿನ ಕಾರ್ಯತಂತ್ರದ ಸಂಬಂಧವನ್ನು ನಾಶಮಾಡಲು ನಾವು ಅನುಮತಿಸುವುದಿಲ್ಲ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಮತ ಹಾಕಿದ ಎಲ್ಲಾ ಭಾರತೀಯ - ಅಮೆರಿಕನ್ನರಿಗೆ ಈ ಬಗ್ಗೆ ಕರೆ ನೀಡಲಾಗುವುದು ಎಂದು ಹೇಳಿದರು. ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತವನ್ನು ಗುರಿಯಾಗಿಸಿಕೊಂಡು ಟ್ರಂಪ್ ಅವರ ಮಾತುಗಳು ಮತ್ತು ಅಧಿಕ ಸುಂಕ ಕ್ರಮಕ್ಕೆ ಅಮೆರಿಕದ ಅಧಿಕಾರಿಗಳಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಪಾಕಿಸ್ತಾನವು ಡೊನಾಲ್ಡ್ ಟ್ರಂಪ್ ಕುಟುಂಬದೊಂದಿಗೆ ವ್ಯಾಪಾರ ಒಪ್ಪಂದಗಳಲ್ಲಿ ತೊಡಗಿಸಿಕೊಳ್ಳಲು ಒಪ್ಪಿಕೊಂಡಿದ್ದರಿಂದ, ವೈಯಕ್ತಿಕ ಹಿತಾಸಕ್ತಿಗಾಗಿ ಟ್ರಂಪ್ ಭಾರತದೊಂದಿಗಿನ ಸಂಬಂಧವನ್ನು ಬದಿಗಿಟ್ಟಿದ್ದಾರೆಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಆರೋಪಿಸಿದ್ದಾರೆ. ಇದು ಅಮೆರಿಕಕ್ಕೆ ದೊಡ್ಡ ಹಾನಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದಶಕಗಳ ಹಿಂದಿನಿಂದ ಉಭಯಪಕ್ಷೀಯ ಆಧಾರದ ಮೇಲೆ ಅಮೆರಿಕವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದೊಂದಿಗೆ ತನ್ನ ಸಂಬಂಧವನ್ನು ಉತ್ತಮಗೊಳಿಸಲು ಕೆಲಸ ಮಾಡಿದೆ. ತಂತ್ರಜ್ಞಾನ, ಪ್ರತಿಭೆ ಮತ್ತು ಆರ್ಥಿಕತೆ, ಇತರ ಹಲವು ವಿಷಯಗಳಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ದೇಶ ಭಾರತವಾಗಿದೆ. ಚೀನಾದ ಬೆದರಿಕೆಯನ್ನು ನಿಭಾಯಿಸುವಲ್ಲಿ ಭಾರತದ ಜೊತೆಗೆ ಹೊಂದಾಣಿಕೆ ಅನಿವಾರ್ಯ ಎಂದು ಸುಲ್ಲಿವನ್ ಅವರು ಹೇಳಿದ್ದಾರೆ.