image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಛತ್ತೀಸ್​ಗಢದ ಸುಕ್ಮಾದಲ್ಲಿ 33 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದ 11 ಮಂದಿ ಸೇರಿದಂತೆ ಒಟ್ಟು 20 ನಕ್ಸಲರು ಪೊಲೀಸರಿಗೆ ಶರಣು

ಛತ್ತೀಸ್​ಗಢದ ಸುಕ್ಮಾದಲ್ಲಿ 33 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದ 11 ಮಂದಿ ಸೇರಿದಂತೆ ಒಟ್ಟು 20 ನಕ್ಸಲರು ಪೊಲೀಸರಿಗೆ ಶರಣು

ಸುಕ್ಮಾ: ಛತ್ತೀಸ್​ಗಢದ ಸುಕ್ಮಾದಲ್ಲಿ ಒಟ್ಟಾರೆ 33 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದ 11 ಮಂದಿ ಸೇರಿದಂತೆ ಒಟ್ಟು 20 ನಕ್ಸಲರು ಇಂದು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಮಾವೋವಾದಿಗಳ ಅತ್ಯಂತ ಬಲಿಷ್ಠ ಮಿಲಿಟರಿ ರಚನೆ ಎಂದು ಪರಿಗಣಿಸಲಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ ನಂ.1ರ ಹಾರ್ಡ್‌ಕೋರ್ ಕೇಡರ್ ಸೇರಿದಂತೆ 9 ಮಹಿಳೆಯರೂ ಇದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾವೋವಾದಿಗಳ ಸಿದ್ದಾಂತಗಳಿಂದ ನಿರಾಸೆ ಹಾಗೂ ಕೇಡರ್​ಗಳು ಅಮಾಯಕ ಬುಡಕಟ್ಟು ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ನಿಷೇಧಿತ ಸಂಘಗಳ ಒಳಗೆ ಹೆಚ್ಚುತ್ತಿರುವ ಆಂತರಿಕ ವ್ಯತ್ಯಾಸಗಳಿಂದ ಬೇಸತ್ತು ಹಿರಿಯ ಸಿಆರ್​ಪಿಎಫ್​ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಎಸ್​ಪಿ ಕಿರಣ್​ ಚಾವಣ್ ಹೇಳಿದರು. ನಕ್ಸಲರು ರಾಜ್ಯ ಸರ್ಕಾರದ ನಿಯಾದ್​ ನೆಲ್ಲನರಾ (ನಿಮ್ಮ ಉತ್ತಮ ಗ್ರಾಮ) ಯೋಜನೆ ಹಾಗೂ ಪುನರ್ವಸತಿ ನೀತಿಯಿಂದ ಪ್ರೇರೇಪಿತಗೊಂಡು ಶರಣಾಗಿರುವುದಾಗಿ ಅವರು ತಿಳಿಸಿದರು. ಈ ಯೋಜನೆ ಕುಗ್ರಾಮಗಳ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಮಾವೋವಾದಿಗಳ ಪಿಎಲ್‌ಜಿಎ ಬೆಟಾಲಿಯನ್ ನಂ.1ರ ಸದಸ್ಯೆ ಶರ್ಮಿಳಾ ಅಲಿಯಾಸ್ ಉಯಿಕಾ ಭೀಮೆ (25) ಮತ್ತು ಮಾವೋವಾದಿಗಳ ಪಶ್ಚಿಮ ಬಸ್ತಾರ್ ವಿಭಾಗದ ಸದಸ್ಯೆ ತಾತಿ ಕೋಸಿ ಅಲಿಯಾಸ್ ಪರ್ಮಿಳಾ (20) ಎಂಬವರು ತಲಾ 8 ಲಕ್ಷ ರೂ ಘೋಷಿತ ಬಹುಮಾನ ಹೊಂದಿದ್ದರು. ಮಾವೋ ಪ್ರದೇಶ ಸಮಿತಿ ಸದಸ್ಯರಾಗಿರುವ ಮುಚಕಿ ಹಿಡ್ಮಾ (54) ಎಂಬ ಮತ್ತೊಬ್ಬ ಕೇಡರ್‌ಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಇತರ ನಾಲ್ವರು ಕೇಡರ್‌ಗಳಿಗೆ ತಲಾ 4 ಲಕ್ಷ ರೂ. ಮತ್ತು ಇತರ ಅನೇಕ ಕೇಡರ್‌ಗಳಿಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಶರಣಾದ ಎಲ್ಲಾ ನಕ್ಸಲರಿಗೆ ತಲಾ 50,000 ರೂ. ನೆರವು ನೀಡಲಾಗಿದ್ದು, ಸರ್ಕಾರದ ನೀತಿಯ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು. ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಜೀವನ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ ಹಿಂಸಾಚಾರವನ್ನು ತ್ಯಜಿಸಬೇಕು. ನಿಮಗೆ ಭದ್ರತೆ ಮತ್ತು ಗೌರವಾನ್ವಿತ ಜೀವನವನ್ನು ಸರ್ಕಾರ ಖಾತ್ರಿಪಡಿಸಿಕೊಡಲಿದೆ ಎಂದು ಎಸ್​ಪಿ ಹೇಳಿದರು.

Category
ಕರಾವಳಿ ತರಂಗಿಣಿ