ಬೆಂಗಳೂರು: ಮುಂದಿನ ತಿಂಗಳು ಎಚ್‌ಎಎಲ್ ತಾನು ನಿರ್ಮಿಸಿದ 2 ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ಭಾರತೀಯ ಸೇನೆಗೆ ತಲುಪಿಸುವ ಸಾಧ್ಯತೆ ಇದೆ ಎಂದು ಕೇಂದ್ರ ರಕ್ಷಣಾ ಕಾರ್ಯದರ್ಶಿ ಆರ್ ಕೆ ಸಿಂಗ್ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮುಂದಿನ ತಿಂಗಳು ಎರಡು ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ತಲುಪಿಸುವ ಸಾಧ್ಯತೆ ಇದೆ. ಎರಡು ವಿಮಾನಗಳ ವಿತರಣೆಯ ನಂತರ 97 ತೇಜಸ್ ಜೆಟ್‌ಗಳ ಹೆಚ್ಚುವರಿ ಬ್ಯಾಚ್ ಅನ್ನು ಖರೀದಿಸಲು ಸರ್ಕಾರ ಎಚ್‌ಎಎಲ್‌ನೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಆರ್ ಕೆ ಸಿಂಗ್ ಹೇಳಿದ್ದಾರೆ.
ಹಿಂದಿನ ಒಪ್ಪಂದದಡಿಯಲ್ಲಿ ತೇಜಸ್ ಮಾರ್ಕ್ 1ಎ ಜೆಟ್‌ಗಳ ವಿತರಣೆಯಲ್ಲಿ ವಿಳಂಬದ ಬಗ್ಗೆ ಭಾರತೀಯ ವಾಯುಪಡೆ (ಐಎಎಫ್) ಕಳವಳ ವ್ಯಕ್ತಪಡಿಸಿತ್ತು. ಇದೇ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ರಕ್ಷಣಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್ ಕೆ ಸಿಂಗ್, ತೇಜಸ್ ಕುರಿತ ಆಶಾದಾಯಕ ಬೆಳವಣಿಗಗಳು ನಡೆಯುತ್ತಿದ್ದು, ಮೊದಲ ಎರಡು ವಿಮಾನಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಶಸ್ತ್ರಾಸ್ತ್ರ ಏಕೀಕರಣದೊಂದಿಗೆ ತಲುಪಿಸಲಾಗುವುದು. ಸುಮಾರು 38 ತೇಜಸ್ ಜೆಟ್‌ಗಳು ಈಗಾಗಲೇ ಸೇವೆಯಲ್ಲಿದ್ದು, ಇನ್ನೂ 80ಕ್ಕೂ ಹೆಚ್ಚು ವಿಮಾನಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು. ಕಳೆದ ವಾರ ಕೂಡ ಕೇಂದ್ರ ಸರ್ಕಾರವು ಸುಮಾರು ರೂ. 67,000 ಕೋಟಿ ವೆಚ್ಚದಲ್ಲಿ 97 ತೇಜಸ್ ಯುದ್ಧವಿಮಾನಗಳ ಹೆಚ್ಚುವರಿ ಬ್ಯಾಚ್ ಅನ್ನು ಅನುಮೋದಿಸಿತು. ಫೆಬ್ರವರಿ 2021 ರಲ್ಲಿ, ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗಾಗಿ 83 ತೇಜಸ್ Mk-1A ಜೆಟ್‌ಗಳ ಖರೀದಿಗಾಗಿ HAL ಜೊತೆ ರೂ. 48,000 ಕೋಟಿ ಒಪ್ಪಂದ ಮಾಡಿಕೊಂಡಿತ್ತು. ತೇಜಸ್ ಜೆಟ್ ವಿಮಾನಗಳ ವಿತರಣೆಯು ಪ್ರಾಥಮಿಕವಾಗಿ ಅಮೆರಿಕದ ರಕ್ಷಣಾ ಪ್ರಮುಖ GE ಏರೋಸ್ಪೇಸ್ ಜೆಟ್‌ಗಳಿಗೆ ಶಕ್ತಿ ತುಂಬಲು ತನ್ನ ಏರೋ ಎಂಜಿನ್‌ಗಳ ಪೂರೈಕೆ ಮಾಡಬೇಕಿತ್ತು. ಆದರೆ ಈ ಸಂಸ್ಥೆ ಹಲವಾರು ಗಡುವುಗಳನ್ನು ತಪ್ಪಿಸಿಕೊಂಡ ಕಾರಣ ಭಾರತದಲ್ಲಿ ಎಚ್ ಎಎಲ್ ಜೆಟ್ ವಿಮಾನ ತಯಾರಿಕೆಗೆ ವಿಳಂಬವಾಗಿದೆ ಎನ್ನಲಾಗಿದೆ.