image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಜಮ್ಮು ಮತ್ತು ಕಾಶ್ಮೀರದ ಅವಳಿ ಜಿಲ್ಲೆಗಳಲ್ಲಿ ಮತ್ತೆ ಭೂಕುಸಿತ ಮತ್ತು ಮೇಘಸ್ಫೋಟದಿಂದ ದಿಢೀರ್ ಪ್ರವಾಹ

ಜಮ್ಮು ಮತ್ತು ಕಾಶ್ಮೀರದ ಅವಳಿ ಜಿಲ್ಲೆಗಳಲ್ಲಿ ಮತ್ತೆ ಭೂಕುಸಿತ ಮತ್ತು ಮೇಘಸ್ಫೋಟದಿಂದ ದಿಢೀರ್ ಪ್ರವಾಹ

ಜಮ್ಮು ಕಾಶ್ಮೀರ : ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಾಶ್ಮೀರದ ಅವಳಿ ಜಿಲ್ಲೆಗಳಲ್ಲಿ ಶನಿವಾರ ಮುಂಜಾನೆ ಭೂಕುಸಿತ ಮತ್ತು ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಸಂಭವಿಸಿದೆ. ಪ್ರಕೃತಿಯ ವಿಕೋಪದ ಪ್ರತ್ಯೇಕ ಘಟನೆಗಳಲ್ಲಿ ದಂಪತಿ, ಐವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ. ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕೆಲವರು ಕಾಣೆಯಾಗಿದ್ದಾರೆ. ರಾಂಬನ್​​ನ ರಾಜ್ ಗಡ್ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಮೇಘಸ್ಫೋಟ ಹಿನ್ನೆಲೆಯಲ್ಲಿ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಧಿಕಾರಿಗಳು ಕಾಣೆಯಾದವರನ್ನು ಹುಡುಕುತ್ತಿದ್ದಾರೆ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದವರಿಗೆ ತಕ್ಷಣದ ಪರಿಹಾರವನ್ನು ಒದಗಿಸಲಾಗುತ್ತಿದೆ. 

ರಿಯಾಸಿ ಜಿಲ್ಲೆಯ ಮಹೋರ್ ಪ್ರದೇಶದಲ್ಲಿ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಒಂದೇ ಕುಟುಂಬದ ಐವರು ಮಕ್ಕಳು, ದಂಪತಿ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಮಹೋರ್‌ನ ಬದ್ದರ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಈ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ನಜೀರ್ ಅಹ್ಮದ್ ರಾಹಿ (38), ಅವರ ಪತ್ನಿ ವಜಾರಾ ಬಾನೋ ಮತ್ತು ಅವರ ಐವರು ಪುತ್ರರಾದ ಬಿಲಾಲ್ ಅಹ್ಮದ್ (12), ಮುಹಮ್ಮದ್ ಮುಸ್ತಫಾ (10), ಮುಹಮ್ಮದ್ ಆದಿಲ್ (8), ಮುಹಮ್ಮದ್ ಮುಬಾರಕ್ (6) ಮತ್ತು ಮುಹಮ್ಮದ್ ವಸೀಮ್ (4) ಎಂದು ಗುರುತಿಸಲಾಗಿದೆ. ಭೂಕುಸಿತದಲ್ಲಿ ಜನರು ಸಾವನ್ನಪ್ಪಿರುವ ಬಗ್ಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಜನರು ಜಾಗರೂಕರಾಗಿರಿ, ದುರ್ಬಲ ಪ್ರದೇಶಗಳಲ್ಲಿ ಇರುವುದನ್ನು ತಪ್ಪಿಸಿ, ಸುರಕ್ಷತಾ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ದಿನದ 24 ಗಂಟೆಗಳ ಕಾಲ ಮೇಲ್ವಿಚಾರಣೆ ನಡೆಸಬೇಕು. ಅಪಾಯ ಪೀಡಿತ ವಲಯಗಳಿಂದ ನಿವಾಸಿಗಳನ್ನು ಸಕಾಲಿಕವಾಗಿ ಸ್ಥಳಾಂತರಿಸಬೇಕು ಹಾಗೂ ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರ ಮತ್ತು ಸಾಧ್ಯವಿರುವ ಎಲ್ಲ ಸಹಾಯ ಒದಗಿಸಬೇಕೆಂದು ಸಿಎಂ ಒಮರ್ ಅಬ್ದುಲ್ಲಾ ನಿರ್ದೇಶನ ನೀಡಿದ್ದಾರೆ. ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಹಲವಾರು ಉತ್ತರ ಭಾರತದ ರಾಜ್ಯಗಳು ಧಾರಾಕಾರ ಮಳೆಯಿಂದಾಗಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ, ಅಪಾರ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ತುತ್ತಾಗಿವೆ. ಹವಾಮಾನ ಎಚ್ಚರಿಕೆಗಳ ಹೊರತಾಗಿಯೂ ತೀರ್ಥಯಾತ್ರೆಗೆ ಅನುಮತಿ ನೀಡಿರುವ ಬಗ್ಗೆ ಜಮ್ಮುಕಾಶ್ಮೀರ ಎಲ್-ಜಿ ಮನೋಜ್ ಸಿನ್ಹಾ ಅವರ ಮೇಲೆ ಆರೋಪಗಳು ಕೇಳಿಬಂದಿವೆ. ವೈಷ್ಣೋದೇವಿ ದೇಗುಲದಲ್ಲಿ ಸಂಭವಿಸಿದ ಭೂಕುಸಿತದ ಕಾರಣಗಳ ಬಗ್ಗೆ ತನಿಖೆ ನಡೆಸಲು ಸಿನ್ಹಾ ಮೂವರು ಸದಸ್ಯರ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ. ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ (SMVDSB) ಅಧ್ಯಕ್ಷರೂ ಆಗಿರುವ ಸಿನ್ಹಾ ಅವರಿಗೆ ಸಮಿತಿಯು ಎರಡು ವಾರಗಳಲ್ಲಿ ವರದಿ ಸಲ್ಲಿಸಲು ತಿಳಿಸಲಾಗಿದೆ.

Category
ಕರಾವಳಿ ತರಂಗಿಣಿ