ನವದೆಹಲಿ, ಆಗಸ್ಟ್ 26: ಮುಂದಿನ ತಿಂಗಳ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿರುವ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ 'ನಕ್ಸಲಿಸಂ ಅನ್ನು ಬೆಂಬಲಿಸಲು ಸುಪ್ರೀಂ ಕೋರ್ಟ್ ಅನ್ನು ಬಳಸಿಕೊಂಡಿದ್ದರು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ( Amit Shah) ಹೇಳಿಕೆ ನೀಡಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್‌ನ 18 ನಿವೃತ್ತ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿ, ಇದು ಸುಪ್ರೀಂ ಕೋರ್ಟ್ಗೆ ಮಾಡಿದ ಅವಮಾನ ಎಂದು ಕರೆದಿದ್ದರು. ಸುದರ್ಶನ್ ರೆಡ್ಡಿ ವಿರುದ್ಧ ನೀಡಿದ ಅಮಿತ್ ಶಾ ಅವರ ಹೇಳಿಕೆ ದುರದೃಷ್ಟಕರ ಮತ್ತು ಪೂರ್ವಗ್ರಹ ಪೀಡಿತ ಎಂದು ಟೀಕಿಸಿದ್ದರು. ಇದಕ್ಕೆ ವಿರುದ್ಧವಾಗಿ ಇದೀಗ 56 ನಿವೃತ್ತ ನ್ಯಾಯಮೂರ್ತಿಗಳ ತಂಡ ಅಮಿತ್ ಶಾ ಅವರ ಬೆಂಬಲಕ್ಕೆ ನಿಂತಿದೆ. ನ್ಯಾಯಮೂರ್ತಿಗಳು ಬಿಡುಗಡೆ ಮಾಡಿದ ಪತ್ರದಲ್ಲಿ, ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ರಂಜನ್ ಗೊಗೊಯ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಬಾಂಬೆ, ಕೇರಳ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮುಂತಾದ 50 ನ್ಯಾಯಮೂರ್ತಿಗಳು ಈ ಹಿಂದಿನ 18 ನ್ಯಾಯಮೂರ್ತಿಗಳ ಹೇಳಿಕೆಗಳು ನ್ಯಾಯಾಂಗ ಸ್ವಾತಂತ್ರ್ಯದ ಭಾಷೆಯ ಅಡಿಯಲ್ಲಿ ರಾಜಕೀಯ ಪಕ್ಷಪಾತವನ್ನು ಮರೆಮಾಚುವ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ. ಭಾರತದ ಇಂಡಿಯ ಬ್ಲಾಕ್ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ವಿರುದ್ಧ ಅಮಿತ್ ಶಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅಮಿತ್ ಶಾ ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ನಕ್ಸಲಿಸಂ ಅನ್ನು ಬೆಂಬಲಿಸುತ್ತಾರೆ ಎಂದು ಆರೋಪಿಸಿದ್ದರು. ಸುಪ್ರೀಂ ಕೋರ್ಟ್ ನ ಸಾಲ್ವಾ ಜುಡುಮ್ ತೀರ್ಪು ಜಾರಿಯಾಗದಿದ್ದರೆ ಎಡಪಂಥೀಯ ಉಗ್ರವಾದ 2020ರ ವೇಳೆಗೆ ಕೊನೆಗೊಳ್ಳುತ್ತಿತ್ತು ಎಂದಿದ್ದರು.
ಇದಕ್ಕೆ ಪ್ರತಿಯಾಗಿ 56 ನಿವೃತ್ತ ನ್ಯಾಯಮೂರ್ತಿಗಳು ಅಮಿತ್ ಶಾ ವಿರೋಧ ಆರೋಪ ಮಾಡಿದ್ದ ಆ 18 ನ್ಯಾಯಮೂರ್ತಿಗಳ ತಂಡದ ಹೇಳಿಕೆಯನ್ನು ಟೀಕಿಸಿದ್ದಾರೆ. "ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲಿರುವ ಸುದರ್ಶನ್ ರೆಡ್ಡಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರೂ ಅವರು ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಿದ್ದಾಗ ಅವರು ಬೇರೆ ಸ್ಪರ್ಧಿಗಳಂತೆ ರಾಜಕೀಯ ದಾಳಿಗಳನ್ನು, ಬೇರೆಯವರ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ತಮ್ಮ ಉಮೇದುವಾರಿಕೆಯನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ನ್ಯಾಯಾಂಗವನ್ನು ಎಳೆದುತರುವುದು ಸರಿಯಲ್ಲ. ರಾಜಕೀಯ ಅಭ್ಯರ್ಥಿಯ ಟೀಕೆಯಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಿಲ್ಲ" ಎಂದು 50ಕ್ಕೂ ಹೆಚ್ಚು ನ್ಯಾಯಮೂರ್ತಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ವಿರುದ್ಧ ಇಂಡಿಯ ಬ್ಲಾಕ್ನ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಸ್ಪರ್ಧಿಸಲಿದ್ದಾರೆ.