ನವದೆಹಲಿ: "ಗಗನಯಾನ ಯೋಜನೆ ಆತ್ಮನಿರ್ಭರ ಭಾರತದ ಪ್ರಯಾಣದಲ್ಲಿ ಹೊಸ ಅಧ್ಯಾಯ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಬಣ್ಣಿಸಿದ್ದಾರೆ. ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಆಯ್ಕೆಯಾದ ಗಗನಯಾತ್ರಿಗಳನ್ನು 'ರತ್ನಗಳು' ಎಂದು ಕರೆದಿರುವ ಅವರು, ಇಲ್ಲಿನ ಸುಬ್ರೋಟೋ ಪಾರ್ಕ್ನಲ್ಲಿ ಐಎಎಫ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಗನಯಾನಿಗಳನ್ನು ಸನ್ಮಾನಿಸಿದರು. "ನಾವು ಬಾಹ್ಯಾಕಾಶವನ್ನು ಕೇವಲ ಸಂಶೋಧನಾ ಕ್ಷೇತ್ರವಾಗಿ ನೋಡುವುದಿಲ್ಲ. ಬದಲಾಗಿ ನಾಳಿನ ಆರ್ಥಿಕತೆ, ಭದ್ರತೆ, ಇಂಧನ ಮತ್ತು ಮಾನವೀಯತೆಯ ಭವಿಷ್ಯವಾಗಿ ನೋಡುತ್ತೇವೆ. ನಾವು ಭೂಮಿಯ ಮೇಲ್ಮೈಯನ್ನು ಮೀರಿ ಬಾಹ್ಯಾಕಾಶದ ಹೊಸ ಗಡಿಗಳತ್ತ ಸ್ಥಿರವಾಗಿ ಮುನ್ನಡೆಯುತ್ತಿದ್ದೇವೆ. ಚಂದ್ರನಿಂದ ಮಂಗಳಕ್ಕೆ ನಮ್ಮ ಉಪಸ್ಥಿತಿಯನ್ನು ನಾವು ಈಗಾಗಲೇ ಗುರುತಿಸಿದ್ದೇವೆ. ರಾಷ್ಟ್ರವು ಗಗನಯಾನದಂತಹ ಕಾರ್ಯಾಚರಣೆಗಳಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದು ಹೇಳಿದರು. ಈ ಸಾಧನೆಯನ್ನು ಕೇವಲ ತಾಂತ್ರಿಕ ಮೈಲಿಗಲ್ಲು ಅಲ್ಲ, ಆತ್ಮನಿರ್ಭರ ಭಾರತದ ಹೊಸ ಅಧ್ಯಾಯ ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು. "ವಿಶ್ವದ ಪ್ರಮುಖ ಬಾಹ್ಯಾಕಾಶ ಶಕ್ತಿಗಳಲ್ಲಿ ಭಾರತ ಸ್ಥಾನ ಪಡೆದಿದೆ. ಬಾಹ್ಯಾಕಾಶ ಕಾರ್ಯಕ್ರಮವು ಪ್ರಯೋಗಾಲಯಗಳು ಮತ್ತು ಉಡಾವಣಾ ವಾಹನಗಳಿಗೆ ಸೀಮಿತವಾಗಿಲ್ಲ. ಇದು ನಮ್ಮ ರಾಷ್ಟ್ರೀಯ ಆಕಾಂಕ್ಷೆಗಳು ಮತ್ತು ಜಾಗತಿಕ ದೃಷ್ಟಿಕೋನದ ಪ್ರತಿಬಿಂಬವಾಗಿದೆ ಎಂದೂ ತಿಳಿಸಿದರು. "ಚಂದ್ರಯಾನದಿಂದ ಮಂಗಳಯಾನದವರೆಗೆ, ಸೀಮಿತ ಸಂಪನ್ಮೂಲಗಳಿದ್ದರೂ ಸಹ ಅನಿಯಮಿತ ಇಚ್ಛಾಶಕ್ತಿಯು ಅತ್ಯಂತ ಸವಾಲಿನ ಗುರಿಗಳನ್ನು ಗಮನಾರ್ಹ ಸಾಧನೆಗಳಾಗಿ ಪರಿವರ್ತಿಸುತ್ತದೆ ಎಂದು ನಾವು ತೋರಿಸಿಕೊಟ್ಟಿದ್ದೇವೆ. ಬಾಹ್ಯಾಕಾಶದಿಂದ ಪಡೆದ ತಂತ್ರಜ್ಞಾನಗಳು, ಅದು ಸಂವಹನ ಉಪಗ್ರಹಗಳು, ಹವಾಮಾನ ಮೇಲ್ವಿಚಾರಣೆ ಅಥವಾ ವಿಪತ್ತು ನಿರ್ವಹಣೆಯಾಗಿರಬಹುದು. ಭಾರತದಾದ್ಯಂತ ಪ್ರತಿಯೊಂದು ಹಳ್ಳಿ ಮತ್ತು ಪ್ರತಿಯೊಂದು ಕ್ಷೇತ್ರಕ್ಕೂ ಸೇವೆಗಳನ್ನು ಒದಗಿಸುತ್ತಿವೆ. ಭಾರತವು ಬಾಹ್ಯಾಕಾಶ ಪ್ರಯಾಣದಲ್ಲಿ ಹಿಂದೆ ಉಳಿಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮುಂಬರುವ ದಿನಗಳಲ್ಲಿ, ಬಾಹ್ಯಾಕಾಶ ಗಣಿಗಾರಿಕೆ, ಆಳವಾದ ಪರಿಶೋಧನೆ ಮತ್ತು ಗ್ರಹ ಸಂಪನ್ಮೂಲಗಳು ಮಾನವ ನಾಗರಿಕತೆಯ ಹಾದಿಯನ್ನು ಮರು ವ್ಯಾಖ್ಯಾನಿಸುತ್ತವೆ ಎಂದು ಅವರು ತಿಳಿಸಿದರು. ಬಾಹ್ಯಾಕಾಶವು ಇನ್ನು ಮುಂದೆ ಮಿಲಿಟರಿ ಶಕ್ತಿ ಅಥವಾ ತಾಂತ್ರಿಕ ಪರಾಕ್ರಮದ ಸಂಕೇತವಲ್ಲ. ಮಾನವ ನಾಗರಿಕತೆಯ ಸಾಮೂಹಿಕ ಪ್ರಯಾಣದಲ್ಲಿ ಹೊಸ ಹಂತವಾಗಿರುವ ಯುಗವನ್ನು ಜಗತ್ತು ಪ್ರವೇಶಿಸಿದೆ ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದರು. ಶುಭಾಂಶು ಶುಕ್ಲಾ ಅವರು ಆಕ್ಸಿಯಮ್ 4 ಮಿಷನ್ನಲ್ಲಿ ಭಾಗಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿ ವಿವಿಧ ಸಂಶೋಧನೆಗಳನ್ನು ಮಾಡಿದ್ದರು. ಇದೀಗ, ಭಾರತ ನಡೆಸುವ ಗಗನಯಾನ ಯೋಜನೆಗೆ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಆಯ್ಕೆಯಾಗಿದ್ದಾರೆ. ಫೆಬ್ರವರಿ 2024 ರಲ್ಲಿ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್ಎಸ್ಸಿ) ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅವರ ಹೆಸರುಗಳನ್ನು ಮೊದಲ ಬಾರಿಗೆ ಬಹಿರಂಗಪಡಿಸಲಾಯಿತು.