ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ)ಯು ಒಡಿಶಾ ಕರಾವಳಿಯಲ್ಲಿ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (IADWS)ನ ಮೊದಲ ಹಾರಾಟ ಪರೀಕ್ಷೆಗಳನ್ನು ನಿನ್ನೆ(ಶನಿವಾರ) ಮಧ್ಯಾಹ್ನ 12.30ರ ಸುಮಾರಿಗೆ ಯಶಸ್ವಿಯಾಗಿ ನಡೆಸಿದೆ. ಎಲ್ಲ ಸ್ಥಳೀಯ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ (QRSAM), ಅಡ್ವಾನ್ಸ್ಡ್ ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್ (VSHORADS) ಕ್ಷಿಪಣಿಗಳು ಮತ್ತು ಹೈಪವರ್ ಲೇಸರ್ ಆಧಾರಿತ ಡೈರೆಕ್ಟೆಡ್ ಎನರ್ಜಿ ವೆಪನ್ (DEW) ಒಳಗೊಂಡಿರುವ ಬಹು ಪದರದ ವಾಯು ರಕ್ಷಣಾ ವ್ಯವಸ್ಥೆಯೇ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್. ಈ ವಿಶೇಷ ಶಸ್ತ್ರಾಸ್ತ್ರ ವ್ಯವಸ್ಥೆಯ ಘಟಕಗಳ ಸಮಗ್ರ ಕಾರ್ಯಾಚರಣೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಅಭಿವೃದ್ಧಿಪಡಿಸಿದ ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಇದು ಕಾರ್ಯಕ್ರಮದ ನೋಡಲ್ ಪ್ರಯೋಗಾಲಯ. VSHORADS ಮತ್ತು DEW ಅನ್ನು ಕ್ರಮವಾಗಿ ಸಂಶೋಧನಾ ಕೇಂದ್ರ ಇಮಾರತ್ ಮತ್ತು ಹೈ ಎನರ್ಜಿ ಸಿಸ್ಟಮ್ಸ್ ಮತ್ತು ಸೈನ್ಸಸ್ ಕೇಂದ್ರ ಅಭಿವೃದ್ಧಿಪಡಿಸಿದೆ. ಹಾರಾಟ ಪರೀಕ್ಷೆಗಳ ವೇಳೆ, ಎರಡು ಹೈಸ್ಪೀಡ್ ಫಿಕ್ಸೆಡ್ ವಿಂಗ್ ಅನ್ಮ್ಯಾನ್ಡ್ ಏರಿಯಲ್ ವೆಹಿಕಲ್ ಗುರಿಗಳು ಮತ್ತು ಮಲ್ಟಿ ಕಾಪ್ಟರ್ ಡ್ರೋನ್ ಸೇರಿದಂತೆ ಮೂರು ವಿಭಿನ್ನ ಗುರಿಗಳನ್ನು ಏಕಕಾಲದಲ್ಲಿ QRSAM, VSHORADS ಮತ್ತು ಹೈ ಎನರ್ಜಿ ಲೇಸರ್ ವೆಪನ್ ಸಿಸ್ಟಮ್ ವಿವಿಧ ಶ್ರೇಣಿಗಳು ಮತ್ತು ಎತ್ತರಗಳಲ್ಲಿ ಸಂಪೂರ್ಣವಾಗಿ ನಾಶಪಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಡಿಆರ್ಡಿಒ ಮಾಹಿತಿ ನೀಡಿದೆ. ಪರೀಕ್ಷೆಯ ಸಂದರ್ಭದಲ್ಲಿ ಕ್ಷಿಪಣಿ ವ್ಯವಸ್ಥೆಗಳು ಮತ್ತು ಡ್ರೋನ್ ಪತ್ತೆ ಹಾಗು ನಾಶ ವ್ಯವಸ್ಥೆ, ಶಸ್ತ್ರಾಸ್ತ್ರ ವ್ಯವಸ್ಥೆ ಆಜ್ಞೆ ಮತ್ತು ನಿಯಂತ್ರಣ, ಸಂವಹನ ಮತ್ತು ರಾಡಾರ್ಗಳು ಸೇರಿದಂತೆ ಎಲ್ಲ ಶಸ್ತ್ರಾಸ್ತ್ರ ವ್ಯವಸ್ಥೆಯ ಘಟಕಗಳು ಸೂಕ್ತರೀತಿಯಲ್ಲಿ ಕೆಲಸ ಮಾಡಿವೆ. ಇದು ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಹಾರಾಟದ ದತ್ತಾಂಶವನ್ನು ಸಂಗ್ರಹಿಸಲು ನಿಯೋಜಿಸಲಾದ ರೇಂಜ್ ಉಪಕರಣಗಳಿಂದ ತಿಳಿದುಬಂದಿದೆ. DRDO ಹಿರಿಯ ವಿಜ್ಞಾನಿಗಳು ಮತ್ತು ಸಶಸ್ತ್ರ ಪಡೆಗಳ ಪ್ರತಿನಿಧಿಗಳು ಪರೀಕ್ಷೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಡಿಆರ್ಡಿಒ ಯಶಸ್ವಿಯಾಗಿ ನಡೆಸಿದೆ. ಈ ವ್ಯವಸ್ಥೆಯಲ್ಲಿ ಎಲ್ಲ ಸ್ವದೇಶಿ ಬಹು ಹಂತದ QRSM, VSHORAS ಕ್ಷಿಪಣಿಗಳು ಮತ್ತು DEW ಅನ್ನು ಬಳಸಲಾಗಿದೆ. ಯಶಸ್ವಿ ಪರೀಕ್ಷೆಗಾಗಿ ನಾನು ಡಿಆರ್ಡಿಒ, ಭಾರತದ ಸೇನಾಪಡೆಗಳು ಮತ್ತು ಕೈಗಾರಿಕೆಗಳನ್ನು ಅಭಿನಂದಿಸುತ್ತೇನೆ. ಭಾರತದಲ್ಲಿರುವ ಮಹತ್ವದ ವ್ಯವಸ್ಥೆಗಳ ಮೇಲಿನ ವೈರಿಗಳ ದಾಳಿಯಿಂದ ರಕ್ಷಣೆ ನೀಡುವ ಸಾಮರ್ಥ್ಯ IADWSಕ್ಕಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.