ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪ ಸಲ್ಲಿಸಲು ಇನ್ನೂ 8 ದಿನಗಳು ಬಾಕಿ ಉಳಿದಿರುವಾಗಲೇ ಶೇ 98.2ರಷ್ಟು ಮತದಾರರ ದಾಖಲೆಯನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿದೆ. ಆಕ್ಷೇಪಣೆಗಳ ಅವಧಿಯಲ್ಲಿ ಮತದಾರರಿಗೆ ಕರಡು ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಮಾತ್ರವಲ್ಲದೇ ಎಣಿಕೆ ನಮೂನೆಗಳನ್ನು ಸಲ್ಲಿಸುವಾಗ ಅವರು ಒದಗಿಸದೇ ಇರುವ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ ಎಂದು ಆಯೋಗ ಹೇಳಿದೆ.
ಬಿಹಾರದ ಸಿಇಒ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಶೇ 98.2ರಷ್ಟು ಮತದಾರರ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಜೂನ್ 24ರಿಂದ ಆಗಸ್ಟ್ 24ರವರೆಗೆ 60 ದಿನಗಳಲ್ಲಿ, ಶೇಕಡಾ 98 .2ರಷ್ಟು ಜನರು ತಮ್ಮ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಜನರು ಆಧಾರ್ ಅಥವಾ ಪಟ್ಟಿ ಮಾಡಲಾದ 11 ದಾಖಲೆಗಳಲ್ಲಿ ಯಾವುದನ್ನಾದರೂ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.