ಹೊಸದಿಲ್ಲಿ: ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರು ಯಾವುದೇ ಆರೋಪದಲ್ಲಿ 30 ದಿನಗಳ ಕಾಲ ಸೆರೆಮನೆ ವಾಸದಲ್ಲಿದ್ದರೆ ಅವರು ಸ್ವಯಂಚಾಲಿತವಾಗಿ ಹುದ್ದೆಯಿಂದ ವಜಾಗೊಳ್ಳುವ ಸಂಬಂಧ ಸಂವಿಧಾನ ತಿದ್ದುಪಡಿ ಮಸೂದೆ ವಿರುದ್ಧ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಈ ಮಸೂದೆ ಪರಿಶೀಲನೆಗೆ ರಚಿಸಬೇಕಿರುವ ಜಂಟಿ ಸಂಸದೀಯ ಸಮಿತಿಗೆ ಸೇರಲು ಟಿಎಂಸಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಸದರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಇಂಡಿಯಾ ಬ್ಲಾಕ್ ವಿಳಂಬಗೊಳಿಸಲಿದೆ. ಜೆಪಿಸಿಯನ್ನು ಬಹಿಷ್ಕರಿಸಬೇಕು ಎಂಬ ಒಕ್ಕೊರಲ ಆಗ್ರಹ ಮಾಡುವಂತೆ ಟಿಎಂಸಿ ಒತ್ತಾಯಿಸುತ್ತಿದೆ. ಆದರೆ ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳನ್ನು ಗುರಿ ಮಾಡಿ ಮೋದಿ ಸರ್ಕಾರ ತರಲು ಉದ್ದೇಶಿಸಿರುವ ಈ ಮಸೂದೆಯನ್ನು ಮನಬಂದಂತೆ ರೂಪಿಸಲು ಅವಕಾಶ ನೀಡಬಾರದು ಎನ್ನುವುದು ಇತರ ಪಕ್ಷಗಳ ಅಭಿಮತವಾಗಿದೆ. ಸಮಿತಿಯಲ್ಲಿ 4-5 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಮತ್ತು ಇತರ ಮಿತ್ರಪಕ್ಷಗಳು ಟಿಎಂಸಿಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಡಿಎಂಕೆ ಹಾಗೂ ಎಸ್ಪಿ ಕೂಡಾ ಸಮಿತಿ ಸೇರಲು ಉತ್ಸುಕವಾಗಿವೆ ಎಂದು ಮೂಲಗಳು ಹೇಳಿವೆ. ಗೃಹಸಚಿವ ಅಮಿತ್ ಶಾ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದಂತೆಯೇ ಭಾರಿ ಕೋಲಾಹಲ ಎದ್ದಿದ್ದು, ಈ ವಿಚಾರ ಬುಧವಾರ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪ್ರಸ್ತಾಪವಾಯಿತು. ವಿರೋಧ ಪಕ್ಷಗಳು ಜೆಪಿಸಿಯಿಂದ ಹೊರಗುಳಿಯಬೇಕು ಎಂದು ಹಿರಿಯ ಟಿಎಂಸಿ ಮುಖಂಡ ಆಗ್ರಹಿಸಿದರು. ಆದರೆ ಇತರ ಚಿಕ್ಕಪುಟ್ಟ ಪಕ್ಷಗಳು ಇದನ್ನು ವಿರೋಧಿಸಿ, ಇದಕ್ಕೆ ಭಿನ್ನಮತವನ್ನು ದಾಖಲಿಸಲು ಮತ್ತು ಪರ್ಯಾಯವನ್ನು ಸೂಚಿಸಲು ಇರುವ ವೇದಿಕೆ ಇದು ಎಂಬ ಪ್ರತಿಪಾದನೆ ಮುಂದಿಟ್ಟವು. ವಕ್ಫ್ ಮಸೂದೆಯಂತೆ ಜೆಪಿಸಿಯಲ್ಲಿ ಸರ್ಕಾರ ಹೇಗೂ ಮೇಲುಗೈ ಹೊಂದಿದೆ ಎನ್ನುವುದು ಟಿಎಂಸಿ ವಾದವಾಗಿದೆ. ಜೆಪಿಸಿ ನಡಾವಳಿಗಳನ್ನು ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಉಲ್ಲೇಖಿಸುತ್ತಾ ಬಂದಿದೆ ಎನ್ನುವುದನ್ನು ಟಿಎಂಸಿ ಸ್ಪಷ್ಟಪಡಿಸಿದೆ. ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದರೂ, ಮೂರು ಮಸೂದೆಗಳನ್ನು ಕೊನೆಯ ದಿನ ಮಂಡಿಸಲಾಗಿದೆ. ಮಂಡನೆ ಹಂತದಲ್ಲಿ ಇಂಡಿಯಾ ಕೂಟ ಚರ್ಚೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದು, ಬಿಜೆಪಿ ತನ್ನ ವಿರೋಧಿಗಳನ್ನು ಗುರಿ ಮಾಡಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿತ್ತು.