ನವದೆಹಲಿ; ಜುಲೈ 21 ರಂದು ಪ್ರಾರಂಭವಾದ ಸಂಸತ್ತಿನ ಮಳೆಗಾಲದ ಅಧಿವೇಶನವು ಗುರುವಾರ ಮುಕ್ತಾಯಗೊಂಡಿದೆ. ನಿಗದಿತ ಅವಧಿಗೆ ಒಂದು ದಿನ ಮುಂಚಿತವಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟವು. 32 ದಿನಗಳಲ್ಲಿ ನಡೆದಿದ್ದು 21 ಅಧಿವೇಶನಗಳು ಮಾತ್ರ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಚರ್ಚೆಗೆ ವಿರೋಧ ಪಕ್ಷವು ಪಟ್ಟು ಹಿಡಿದಿದ್ದರಿಂದಾಗಿ ಅಧಿವೇಶನ ನಿರಂತರವಾಗಿ ಅಡಚಣೆಗಳನ್ನು ಕಂಡಿತು. ಲೋಕಸಭೆಯಲ್ಲಿ ಸುಮಾರು ಶೇ. 31 ರಷ್ಟು ಉತ್ಪಾದಕತೆ ಮತ್ತು ರಾಜ್ಯಸಭೆಯಲ್ಲಿ ಸುಮಾರು ಶೇ. 39 ರಷ್ಟು ಉತ್ಪಾದಕತೆ ಕಂಡು ಬಂದಿದೆ.
ಅಧಿವೇಶನದ ಉದ್ದಕ್ಕೂ ನಿರಂತರ ಗದ್ದಲ- ಗಲಾಟೆಗಳು ನಡೆದಿದ್ದರಿಂದ ಲೋಕಸಭೆಯ ಉತ್ಪಾದಕತೆ ಸರಿಸುಮಾರು ಶೇ. 31 ರಷ್ಟಿದ್ದರೆ, ರಾಜ್ಯಸಭೆಯ ಉತ್ಪಾದಕತೆ ಸರಿಸುಮಾರು ಶೇ. 33 ರಷ್ಟಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ಬಾರಿಯ ಅಧಿವೇಶನದಲ್ಲಿ 14 ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಇದರಲ್ಲಿ ಹನ್ನೆರಡು ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ. 15 ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಒಟ್ಟು 15 ಮಸೂದೆಗಳನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ. ಅಲ್ಲದೆ ಒಂದು ಮಸೂದೆಯನ್ನು ಲೋಕಸಭೆಯಲ್ಲಿ ಹಿಂತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಸೇನೆ ಮಾಡಿದ ಯಶಸ್ವಿ ಮತ್ತು ನಿರ್ಣಾಯಕ 'ಆಪರೇಷನ್ ಸಿಂಧೂರ್' ಕುರಿತು ಮಾನ್ಸೂನ್ ಅಧಿವೇಶನದಲ್ಲಿ ವಿಶೇಷ ಚರ್ಚೆ ಮಾಡಲಾಯಿತು. ಇದನ್ನು ಜುಲೈ 28 - 29 ರಂದು ಲೋಕಸಭೆಯಲ್ಲಿ ಮತ್ತು ಜುಲೈ 29-30 ರಂದು ರಾಜ್ಯಸಭೆಯಲ್ಲಿ ನಡೆಸಲಾಯಿತು. ಲೋಕಸಭೆಯಲ್ಲಿ 18 ಗಂಟೆ 41 ನಿಮಿಷಗಳ ಕಾಲ ಚರ್ಚೆ ನಡೆಯಿತು.ಇದರಲ್ಲಿ 73 ಸದಸ್ಯರು ಭಾಗವಹಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮವಾಗಿ ಸದಸ್ಯರು ಎತ್ತಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು. ರಾಜ್ಯಸಭೆಯಲ್ಲಿ ಒಟ್ಟು 16 ಗಂಟೆ 25 ನಿಮಿಷಗಳ ಕಾಲ ಚರ್ಚೆ ನಡೆಯಿತು. ಇದರಲ್ಲಿ 65 ಸದಸ್ಯರು ಭಾಗವಹಿಸಿದರು ಮತ್ತು ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸಿದರು.
ಮಣಿಪುರದಲ್ಲಿ ಮತ್ತಾರು ತಿಂಗಳು ರಾಷ್ಟ್ರಪತಿ ಆಳ್ವಿಕೆ; ಭಾರತದ ಸಂವಿಧಾನದ ವಿಧಿ 356(4) ರ ಅಡಿ ಆಗಸ್ಟ್ 13, 2025 ರಿಂದ ಜಾರಿಗೆ ಬರುವಂತೆ, ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲು ಅನುಮೋದನೆ ಕೋರುವ ಶಾಸನಬದ್ಧ ನಿರ್ಣಯವನ್ನು ಜುಲೈ 30 ರಂದು ಲೋಕಸಭೆಯಲ್ಲಿ ಮತ್ತು ಆಗಸ್ಟ್ 5 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಆದಾಯ -ತೆರಿಗೆ (ಸಂಖ್ಯೆ 2) ಮಸೂದೆ, 2025 ಅನ್ನು ಆಗಸ್ಟ್ 11 ರಂದು ಲೋಕಸಭೆಯು ಪರಿಚಯಿಸಿ ಅಂಗೀಕರಿಸಲಾಯಿತು. ಆಗಸ್ಟ್ 12 ರಂದು ರಾಜ್ಯಸಭೆಯು ಹಿಂತಿರುಗಿಸಿತು. ಜುಲೈ 2024 ರಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಕಾಯ್ದೆಯನ್ನು ಸಂಕ್ಷಿಪ್ತ, ಸ್ಪಷ್ಟ, ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭಗೊಳಿಸಲು ಆದಾಯ-ತೆರಿಗೆ ಕಾಯ್ದೆ, 1961 ರ ಕಾಲಮಿತಿಯ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲಾಗುವುದು ಎಂದು ಘೋಷಿಸಿತ್ತು. ಅದರಂತೆ, ಆದಾಯ-ತೆರಿಗೆ ಮಸೂದೆ, 2025 ಅನ್ನು 13.02.2025 ರಂದು ಲೋಕಸಭೆಯಲ್ಲಿ ಪರಿಚಯಿಸಲಾಯಿತು ಮತ್ತು ಅದನ್ನು ಪರೀಕ್ಷೆಗೆ ಆಯ್ಕೆ ಸಮಿತಿಗೆ ಉಲ್ಲೇಖಿಸಲಾಯಿತು. ಈ ವರದಿಯನ್ನು 21.07.2025 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ. ಇ-ಕ್ರೀಡೆಗಳು, ಶೈಕ್ಷಣಿಕ ಆಟಗಳು ಮತ್ತು ಸಾಮಾಜಿಕ ಗೇಮಿಂಗ್ ಸೇರಿದಂತೆ ಆನ್‌ಲೈನ್ ಗೇಮಿಂಗ್ ವಲಯವನ್ನು ಉತ್ತೇಜಿಸಲು ಮತ್ತು ನಿಯಂತ್ರಿಸಲು ಪ್ರಯತ್ನಿಸುವ ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಅಂಗೀಕರಿಸಲಾಗಿದೆ.