ಅಮೇರಿಕ : ರಷ್ಯಾ ಮತ್ತು ಭಾರತದ ನಡುವಿನ ತೈಲ ವಹಿವಾಟಿನಿಂದ ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿಸಿದರು. ಟ್ರಂಪ್ ಸರ್ಕಾರದ ನಿರ್ಧಾರವನ್ನು ರಾಜಯಕೀಯ ನಾಯಕರು, ಅರ್ಥ ಶಾಸ್ತ್ರಜ್ಞರು ಟೀಕೆ ಮಾಡುತ್ತಿದ್ದಾರೆ. ಒಂದೆಡೆ ಎರಡು ರಾಷ್ಟ್ರಗಳ ಸಂಬಂಧ ಹದಗೆಡುವ ಬಗ್ಗೆ ಭೀತಿಯೂ ಇದೆ. ಈ ಎಲ್ಲದರ ಮಧ್ಯೆ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಎಚ್ಚರಿಕೆಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಮಾತನಾಡಿ, ಚೀನಾವನ್ನು ಎದುರಿಸಲು ಭಾರತವನ್ನು ಪ್ರಜಾಪ್ರಭುತ್ವದ ಪಾಲುದಾರನಂತೆ ನೋಡಬೇಕು. ಭಾರತವನ್ನು ಚೀನಾದಂತೆ ವಿರೋಧಿಯಂತೆ ನೋಡಬಾರದು. ಭಾರತದೊಂದಿಗೆ ಅಮೆರಿಕ ಹೊಂದಿರುವ 25 ವರ್ಷಗಳ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ದೊಡ್ಡ ತಪ್ಪು. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದರೂ, ಚೀನಾದ ಪ್ರಾಬಲ್ಯವನ್ನು ಏಷ್ಯಾದಲ್ಲಿ ಎದುರಿಸಲು ಸಾಧ್ಯವಿರುವ ಏಕೈಕ ದೇಶದ ಜೊತೆಗಿನ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ. ಭಾರತದ ಸಹಾಯ ಅಮೆರಿಕಗೆ ಅವಶ್ಯಕ. ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಸಂಬಂಧದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಟ್ರಂಪ್ ಆಡಳಿತವು ಗಮನಹರಿಸಬೇಕು ಎಂದು ಹೇಳಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ಶೇ.25 ರಷ್ಟು ಸುಂಕ ವಿಧಿಸಿದೆ. ಭಾರತದ ಸರಕುಗಳ ಮೇಲೆ ಈಗಾಗಲೇ ಶೇ 25 ರಷ್ಟು ಸುಂಕವನ್ನು ವಿಧಿಸಲಾಗಿದೆ. ಚೀನಾ ರಷ್ಯಾದಿಂದ ತೈಲವನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಿಲ್ಲ. ಈವರೆಗೆ ಚೀನಾ ಯಾವುದೇ ದೊಡ್ಡ ನಿರ್ಬಂಧಗಳನ್ನು ಎದುರಿಸಿಲ್ಲ. ಇದರಿಂದ ಚೀನಾಗೆ ಯಾವುದೇ ತೊಂದರೆಯೂ ಆಗುತ್ತಿಲ್ಲ. ಆದರೆ ಅಮೆರಿಕ ಭಾರತದ ಮೇಲೆ ಮಾತ್ರ ಕ್ರಮ ಕೈಗೊಂಡರೆ ಹೇಗೆ. ಇದು ಮುಂದಿನ ದಿನಗಳಲ್ಲಿ ಏಷ್ಯಾದಲ್ಲಿ ಅಮೆರಿಕದ ಯೋಜನೆಗಳಿಗೆ ಹಿನ್ನಡೆಯಾಗಬಹುದು. ಅಮೆರಿಕದ ಪ್ರಾಮುಖ್ಯತೆ ಮತ್ತು ಪ್ರಭಾವ ಕಡಿಮೆಯಾಗಬಹುದು ಎಂದು ಟ್ರಂಪ್ ಅವರ ಕಿವಿಹಿಂಡಿದ್ದಾರೆ.
ಭಾರತವು ಚೀನಾದಂತೆ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕದಲ್ಲಿ ಬೇಗನೆ ಉತ್ಪಾದಿಸಲು ಸಾಧ್ಯವಾಗದ ವಸ್ತುಗಳನ್ನು ಭಾರತದಲ್ಲಿ ತಯಾರಿಸಬಹುದು. ಉದಾಹರಣೆಗೆ ಜವಳಿ, ಕಡಿಮೆ ಬೆಲೆಯ ಫೋನ್‌ಗಳು ಮತ್ತು ಸೋಲಾರ್ ಪ್ಯಾನೆಲ್‌ಗಳ ದೊಡ್ಡ ಉತ್ಪಾದನೆಯಲ್ಲಿ ನಾವು ಪ್ರಮುಖ ಪಾಲುದಾರರಾಗಬಹುದು. ಭಾರತವೂ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರ. ರಕ್ಷಣಾ ಕ್ಷೇತ್ರದಲ್ಲಿ, ಭಾರತವು ಅಮೆರಿಕದ ಮಿತ್ರರಾಷ್ಟ್ರಗಳಾದ ಇಸ್ರೇಲ್ ಮತ್ತು ಇತರರೊಂದಿಗೆ ಮಿಲಿಟರಿ ಸಹಕಾರ, ಭಾರತೀಯ ಮಾರುಕಟ್ಟೆಯಲ್ಲಿ ಸೇರಿಕೊಂಡು ಬೆಳೆಯುತ್ತಿದೆ. ಇದು ಅಮೆರಿಕದ ರಕ್ಷಣಾ ಸಲಕರಣೆಗಳಿಗೆ ಒಂದು ದೊಡ್ಡ ಮಾರುಕಟ್ಟೆಯಾಗಿದೆ. ಅಲ್ಲದೆ, ಇದು ಜಗತ್ತಿನ ಭದ್ರತೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. 2023 ರಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಚೀನಾ ಜಾಗತಿಕವಾಗಿ ತನ್ನ ಪ್ರಾಬಲ್ಯವನ್ನು ಸಾಧಿಸುವುದಕ್ಕೆ ಅಡ್ಡಿಯುಂಟುಮಾಡುತ್ತದೆ. ಭಾರತವು ಪ್ರಪಂಚದ ಆರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದೆ. ಭಾರತವೂ ಶೀಘ್ರದಲ್ಲೇ ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಮಾರ್ಪಡುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಏಳಿಗೆ ಜಗತ್ತಿಗೆ ಅಪಾಯಕಾರಿಯಲ್ಲ. ಬದಲಾಗಿ ಚೀನಾದ ಪ್ರಾಬಲ್ಯವನ್ನು ಮುರಿಯುವ ಕೆಲಸ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೆಲವು ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳು ಹೆಚ್ಚಾದರೆ, ಅದರ ಲಾಭವನ್ನು ಚೀನಾ ಪಡೆಯುತ್ತದೆ. ಆದ್ದರಿಂದ, ಅಮೆರಿಕವು ಭಾರತದೊಂದಿಗಿನ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆದ್ಯತೆಯ ಮೇರೆಗೆ ನೇರ ಮಾತುಕತೆ ನಡೆಸಬೇಕು. ಕಳೆದ 40 ವರ್ಷಗಳಿಂದ ಭಾರತ ಮತ್ತು ಅಮೆರಿಕ ಉತ್ತಮ ಸ್ನೇಹಿತರಾಗಿದ್ದವು. ಆದರೆ ಈಗ ಅದು ಹದಗೆಡುತ್ತಿದೆ. ಈ ಕಷ್ಟದ ಸಮಯದಲ್ಲಿ ಮಾತುಕತೆ ನಡೆಸಿದರೆ, ಅದು ಮುಂದೆ ಒಳ್ಳೆಯದಾಗಬಹುದು.