ಗಾಜಾ: ಗಾಜಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್ ರಕ್ಷಣ ಸಚಿವರು ಅನುಮೋದನೆ ನೀಡಿದ್ದು, ಸುಮಾರು 60,000 ಮೀಸಲು ಸೈನಿಕರನ್ನು ಕರೆಸಲು ಅಧಿಕಾರ ನೀಡಿದ್ದಾರೆ ಎಂದು ಅವರ ಸಚಿವಾಲಯ ದೃಢಪಡಿಸಿರುವುದಾಗಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಸುಮಾರು ಎರಡು ವರ್ಷಗಳಿಂದ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಕದನ ವಿರಾಮಕ್ಕಾಗಿ ಒತ್ತಾಯಿಸುತ್ತಿರುವವರು ಇತ್ತೀಚಿನ ಪ್ರಸ್ತಾಪದ ಕುರಿತು ಅಧಿಕೃತ ಇಸ್ರೇಲಿ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ವೇಳೆಯಲ್ಲೇ , ರಕ್ಷಣ ಸಚಿವ ಇಸ್ರೇಲ್ ಕಾಟ್ಜ್ ಅವರ ಈ ನಡೆ ಹಮಾಸ್ ಮೇಲೆ ಒತ್ತಡ ಹೇರಿದೆ ಎಂದು AFP ಗೆ ದೃಢಪಡಿಸಲಾಗಿದೆ. ಮಧ್ಯವರ್ತಿ ಕತಾರ್ ಎಚ್ಚರಿಕೆಯ ಆಶಾವಾದ ವ್ಯಕ್ತಪಡಿಸಿದ್ದರೂ, ಹಿರಿಯ ಇಸ್ರೇಲಿ ಅಧಿಕಾರಿಯೊಬ್ಬರು, ಯಾವುದೇ ಒಪ್ಪಂದದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ತನ್ನ ಕರೆಗೆ ಸರಕಾರ ದೃಢವಾಗಿ ನಿಲ್ಲಲಿದೆ ಎಂದಿದ್ದಾರೆ.
ಹಮಾಸ್ ಅನುಮೋದಿಸಿರುವ 60 ದಿನಗಳ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ, ಕೆಲವು ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆ ಮತ್ತು ಗಾಜಾಗೆ ನೆರವಾಗಲು ಅವಕಾಶ ನೀಡುವ ನಿಬಂಧನೆಗಳನ್ನು ಪ್ರಸ್ತಾಪಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ,ಕಳೆದ ವಾರ "ಎಲ್ಲಾ ಒತ್ತೆಯಾಳುಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡುವ ಒಪ್ಪಂದವನ್ನು ಮತ್ತು ಯುದ್ಧವನ್ನು ಕೊನೆಗೊಳಿಸುವ ನಮ್ಮ ಷರತ್ತುಗಳ ಪ್ರಕಾರ ಒಪ್ಪಿಕೊಳ್ಳುತ್ತದೆ'' ಎಂದು ಹೇಳಿದ್ದರು. ಅಮೆರಿಕದ ಬೆಂಬಲದೊಂದಿಗೆ ಕತಾರ್ ಮತ್ತು ಈಜಿಪ್ಟ್, ಆಗಾಗ್ಗೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಕ್ರಿಯೆಗಳಿಗೆ ಮಧ್ಯಸ್ಥಿಕೆ ವಹಿಸಿವೆ.ಚೆಂಡು ಈಗ ಇಸ್ರೇಲ್ ಅಂಗಳದಲ್ಲಿದೆ ಎಂದು ಈಜಿಪ್ಟ್ ಹೇಳಿತ್ತು.