ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದೇಶದ ಹಲವು ಭಾಗದಲ್ಲಿ ಭಾರಿಯಿಂದ ಅತಿ ಹೆಚ್ಚು ಮಳೆಯಾಗುತ್ತಿದ್ದು, ವಿಶೇಷವಾಗಿ ದಕ್ಷಿಣ, ಪೂರ್ವ ಮತ್ತು ಪಶ್ಚಿಮ, ಕೇಂದ್ರ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯ ವಾಯುವ್ಯ ಪಶ್ಚಿಮ ಮಧ್ಯ ಮತ್ತು ಉತ್ತರ ಆಂಧ್ರಪ್ರದೇಶ, ದಕ್ಷಿಣ ಒಡಿಶಾ ಕರಾವಳಿಗಳಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡಿದೆ. ಒಡಿಶಾದಲ್ಲಿ ಕಡಿಮೆ ಒತ್ತಡ ಪ್ರದೇಶ ತೀವ್ರಗೊಳ್ಳಲಿದ್ದು, ರಾಜ್ಯದ ಗೋಪಾಲಪುರದಿಂದ ದಕ್ಷಿಣಕ್ಕೆ 30 ಕಿ.ಮೀ ವರೆಗೆ ಹಾಗೂ ಆಂಧ್ರಪ್ರದೇಶದ ಕಳಿಂಗಪಟ್ಟಣದಿಂದ ಈಶಾನ್ಯಕ್ಕೆ 110 ಕಿಮೀ ದೂರದಲ್ಲಿ ಈ ಒತ್ತಡ ಪ್ರದೇಶ ರೂಪುಗೊಳ್ಳಲಿದೆ. ಈ ಒತ್ತಡ ಪ್ರದೇಶವೂ ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮವಾಗಿ ಆಂಧ್ರಪ್ರದೇಶ ಕರಾವಳಿ, ದಕ್ಷಿಣ ಛತ್ತೀಸ್ಗಢ, ದಕ್ಷಿಣ ಒಡಿಶಾ, ತೆಲಂಗಾಣ, ಕರ್ನಾಟಕದ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗಲಿದೆ. ಮುಂಬೈ, ಗೋವಾ ಸೇರಿದಂತೆ ಕೊಂಕಣ, ಮಹಾರಾಷ್ಟ್ರ ಘಾಟ್ ಹಾಗೂ ಕರ್ನಾಟಕದ ಕರಾವಳಿ ಮತ್ತು ಗುಜರಾತ್ನಲ್ಲಿ ಇಂದು ಮತ್ತು ನಾಳೆ ಅಂದರೆ, ಆಗಸ್ಟ್ 19 ಮತ್ತು 20 ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮುಂಬೈ ನಗರದಲ್ಲಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರದಲ್ಲಿ ಮಳೆಗೆ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಐಎಂಡಿ ವಿಜ್ಞಾನಿ ಉಮಾ ಶಂಕರ್ ದಾಸ್ ಪ್ರಕಾರ ಮಳೆಯಿಂದ ಮುಂಬೈನ ಹಲವು ಪ್ರದೇಶದಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ. ಈ ಮುನ್ಸೂಚನೆ ಹಿನ್ನೆಲೆ ನಗರಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 3- 4 ದಿನಗಳಲ್ಲಿ ದಕ್ಷಿಣ ಪರ್ಯಾಯ ದ್ವೀಪ ಮತ್ತು ಮಧ್ಯ ಭಾರತದಲ್ಲಿ ಮಾನ್ಸೂನ್ ಸಕ್ರಿಯವಾಗುವ ಸಾಧ್ಯತೆಯಿದೆ. ಐಎಂಡಿ ಮುನ್ಸೂಚನೆ ಅನುಸಾರ, ರಾಷ್ಟ್ರ ರಾಜಧಾನಿಯಲ್ಲಿ ಗುಡುಗು ಸಹಿತ ಮಿಂಚಿನ ಮಳೆಯಾಗಲಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದ ಆದಿಲಬಾದ್, ಕೊಮರಾಮ್ ಭೀಮ್ ಅಸೀಫ್ಬಾದ್ ಮತ್ತು ಮಂಚೇರಿಯಲ್ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ನಿರ್ಮಲ್, ನಿಜಾಮಾಬಾದ್, ಜಯಶಂಕರ್ ಭೂಪಾಲಪಲ್ಲಿ, ಮೇಡಕ್, ಕಾಮರೆಡ್ಡಿ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರಿಯಿಂದ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚಿನಿಂದ ಕೂಡಿದ ಮಳೆ ಪ್ರಮಾಣ ಹೆಚ್ಚಿರಲಿದೆ. ಮುಂದಿನ 24 ಗಂಟೆಗಳಲ್ಲಿ ನಬರಂಗ್‌ಪುರ, ನುವಾಪಾಡಾ, ಕಲಹಂಡಿ, ಕೊರಾಪುಟ್, ಮಲ್ಕಂಗಿರಿ, ಬೋಲಂಗೀರ್ ಮತ್ತು ರಾಯಗಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಆಗಸ್ಟ್ 20 ರಂದು ಬಾಲಸೋರ್, ಭದ್ರಕ್, ಜಾಜ್‌ಪುರ, ಕೇಂದ್ರಪಾರ, ಕಟಕ್, ಜಗತ್‌ಸಿಂಗ್‌ಪುರ, ಪುರಿ, ಖೋರ್ಧಾ, ಗಂಜಾಂ, ಗಜಪತಿ ಮತ್ತು ನಯಾಗಢ ಹೆಚ್ಚಿನ ಮಳೆ ನಿರೀಕ್ಷಿಸಲಿದೆ ಎಂದು ತಿಳಿಸಿದೆ.