ವಾಷಿಂಗ್ಟನ್: ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ನಿರ್ಣಾಯಕ ಮಾತುಕತೆಗಳನ್ನು ನಡೆಸಿದರು. ಉಕ್ರೇನ್ ಮೇಲಿನ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ತ್ರಿಪಕ್ಷೀಯ ಮಾತುಕತೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಶಿಸಿದ್ದಾರೆ. ಪುಟಿನ್ ಅವರನ್ನು ಭೇಟಿಯಾದ ನಂತರ ಮತ್ತು ಯುದ್ಧವನ್ನು ಕೊನೆಗೊಳಿಸಬಹುದು ಎಂಬ ಆಶಾಭಾವ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಹೇಳಿದ ರಿಯಾಯಿತಿಗಳಿಗೆ ಒಪ್ಪಿಕೊಳ್ಳುವ ಜವಾಬ್ದಾರಿ ಈಗ ಝೆಲೆನ್ಸ್ಕಿ ಮೇಲಿದೆ ಎಂದು ಅಲಾಸ್ಕಾ ಸಭೆ ಬಳಿಕ ಹೇಳಿದ್ದರು. ಈ ಹೇಳಿಕೆ ಬಳಿಕ ಸೋಮವಾರ ತರಾತುರಿಯಲ್ಲಿ ಸಭೆ ನಡೆಸಲಾಗಿದೆ. ಶುಕ್ರವಾರದ ಶೃಂಗಸಭೆಯಿಂದ ಹೊರಗುಳಿದಿದ್ದ ಯುರೋಪಿಯನ್ ನಾಯಕರು, ಈಗ ಅಮೆರಿಕ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು. ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ಮಾತನಾಡಿದರು. ರಷ್ಯಾದೊಂದಿಗಿನ ಯುದ್ಧ ಕೊನೆಗೊಳಿಸುವ ಮತ್ತು ಉಕ್ರೇನ್ ಹಾಗೂ ಯುರೋಪ್ ಖಂಡವನ್ನು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದರು.
ಹೆಚ್ಚು ಸ್ನೇಹಪರವಾಗಿದ್ದ ಟ್ರಂಪ್ - ಝೆಲೆನ್ಸ್ಕಿ ಭೇಟಿ: ಕೆಲವೇ ತಿಂಗಳುಗಳ ಹಿಂದೆ ಟ್ರಂಪ್ ಮತ್ತು ಝೆಲೆನ್ಸ್ಕಿ ಕೊನೆಯ ಬಾರಿಗೆ ಓವಲ್ ಕಚೇರಿಯಲ್ಲಿ ಭೇಟಿಯಾಗಿದ್ದರು. ಆಗ ದೊಡ್ಡ ಪ್ರಹಸನವೇ ನಡೆದಿತ್ತು. ಆದರೆ ಸೋಮವಾರ ಇಬ್ಬರು ನಾಯಕರ ಮುಖಾಮುಖಿ ಗಮನಾರ್ಹವಾಗಿ ಭಿನ್ನವಾಗಿ ಕಾಣುತ್ತಿತ್ತು. ಟ್ರಂಪ್ ಮತ್ತು ವ್ಯಾನ್ಸ್, ಝೆಲೆನ್ಸ್ಕಿ ಅವರನ್ನು "ಅಗೌರವ" ಎಂದು ಟೀಕಿಸಿ ಭವಿಷ್ಯದ ಅಮೆರಿಕನ್ ಬೆಂಬಲದ ಬಗ್ಗೆ ಕಳೆದ ಫೆಬ್ರವರಿಯಲ್ಲಿ ಎಚ್ಚರಿಕೆ ನೀಡಿದ ಬಳಿಕ ಈ ಸಭೆ ನಡೆದಿರುವುದು ವಿಶೇಷ. ಸಭೆಯು ಇಬ್ಬರು ನಾಯಕರ ನಡುವೆ ಹೆಚ್ಚು ನಗು ಮತ್ತು ಆಹ್ಲಾದಕರ ಮಾತುಗಳೊಂದಿಗೆ ನಡೆಯಿತು. ಅಮೆರಿಕ ಭದ್ರತಾ ಖಾತರಿಗಳವರೆಗೆ ಉಕ್ರೇನ್ 'ಎಲ್ಲವನ್ನೂ' ಬಯಸುತ್ತದೆ ಎಂದು ಝೆಲೆನ್ಸ್ಕಿ ಇದೇ ವೇಳೆ ಹೇಳಿದರು. ಸೋಮವಾರದ ಓವಲ್ ಕಚೇರಿ ಸಭೆಯ ದೊಡ್ಡ ವಿಷಯವೆಂದರೆ, ಉಕ್ರೇನ್ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಅಮೆರಿಕ ಭದ್ರತಾ ಖಾತರಿಗಳು ಏನು ಮತ್ತು ಟ್ರಂಪ್ ಅವುಗಳನ್ನು ಒದಗಿಸಲು ಸಿದ್ಧರಿದ್ದಾರೆಯೇ ಎಂಬುದೇ ಆಗಿತ್ತು.
ಆಯುಧಗಳ ಮಾರಾಟ ಮತ್ತು ತರಬೇತಿಯ ಮೂಲಕ ಬಲವಾದ ಉಕ್ರೇನಿಯನ್ ಸೈನ್ಯ ಸೇರಿದಂತೆ ತನ್ನ ದೇಶವು ಸುರಕ್ಷಿತವಾಗಿರಲು ಏನು ಬೇಕು ಎಂದು ಝೆಲೆನ್ಸ್ಕಿ ಈ ವೇಳೆ ವಿವರಿಸಿದರು. ಎರಡನೇ ಭಾಗ ಎಂದರೆ, ಸೋಮವಾರದ ಮಾತುಕತೆಗಳ ಫಲಿತಾಂಶ ಮತ್ತು EU ದೇಶಗಳು, NATO ಮತ್ತು US ಯುದ್ಧಪೀಡಿತ ದೇಶಕ್ಕೆ ಏನು ಖಾತರಿಪಡಿಸಬಹುದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಝೆಲೆನ್ಸ್ಕಿ ಹೇಳಿದರು. ಅಮೆರಿಕದ ಸೈನಿಕರ ನೆರವು ಸಿಗದೇ ಇರಬಹುದು. ಆದರೆ NATO-ತರಹದ ಭದ್ರತಾ ಉಪಸ್ಥಿತಿ ಇರುತ್ತದೆ ಆದರೆ EU ನಾಯಕರೊಂದಿಗಿನ ಅವರ ಮಧ್ಯಾಹ್ನದ ಸಭೆಯಲ್ಲಿ ಆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಝೆಲೆನ್ಸ್ಕಿತಿಳಿಸಿದರು. ರಷ್ಯಾದೊಂದಿಗೆ ಶಾಂತಿ ಒಪ್ಪಂದ ಬಾಳಿಕೆ ಬರಲು ಉಕ್ರೇನ್‌ಗೆ ಅಗತ್ಯವಿರುವ NATO-ತರಹದ ಭದ್ರತಾ ಖಾತರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಉಕ್ರೇನ್ NATO ಸೇರುವುದನ್ನು ಪುಟಿನ್ ಸಂಪೂರ್ಣವಾಗಿ ವಿರೋಧಿಸುತ್ತಾರೆ. ಹೀಗಾಗಿ ಬೇರೆ ರಕ್ಷಣೆಯ ವ್ಯವಸ್ಥೆಗಳನ್ನು ಮಾಡಲು ಟ್ರಂಪ್ ಆಸಕ್ತಿ ಹೊಂದಿದ್ದಾರೆ.