image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕೃಷಿ ಮತ್ತು ಡೈರಿ ವಲಯಗಳಲ್ಲಿ ಭಾರತ ಮಾರುಕಟ್ಟೆ ಪ್ರವೇಶಕ್ಕಾಗಿ ಅಮೆರಿಕ ಒತ್ತಾಯ

ಕೃಷಿ ಮತ್ತು ಡೈರಿ ವಲಯಗಳಲ್ಲಿ ಭಾರತ ಮಾರುಕಟ್ಟೆ ಪ್ರವೇಶಕ್ಕಾಗಿ ಅಮೆರಿಕ ಒತ್ತಾಯ

ವಾಷಿಂಗ್ಟನ್: ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮುಂದಿನ ಸುತ್ತಿನ ಮಾತುಕತೆಗಾಗಿ ಆಗಸ್ಟ್ 25ರಂದು ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ನಿಯೋಗದ ಸಭೆಯನ್ನು ಮುಂದೂಡುವ ಸಾಧ್ಯತೆಯಿದೆ. ಕೃಷಿ ಮತ್ತು ಡೈರಿ ಕ್ಷೇತ್ರಗಳಲ್ಲಿ ಗಮನಾರ್ಹ ಮಾರುಕಟ್ಟೆ ಪ್ರವೇಶವನ್ನು ವಾಷಿಂಗ್ಟನ್ ಬಯಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಬೇಡಿಕೆಯನ್ನು ಭಾರತ ಸ್ವೀಕರಿಸುವ ಸಾಧ್ಯತೆ ಕಡಿಮೆಯಿದೆ. ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಆರನೇ ಸುತ್ತಿನ ಮಾತುಕತೆಗಾಗಿ ಅಮೆರಿಕ ತಂಡ ಭಾರತಕ್ಕೆ ಭೇಟಿ ನೀಡಬೇಕಿತ್ತು. ಆಗಸ್ಟ್​ 25ರಿಂದ 29ರ ವರೆಗೆ ಮಾತುಕತೆ ನಿಗದಿಯಾಗಿತ್ತು. ಈ ಭೇಟಿಯನ್ನು ಮರುನಿಗದಿಪಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿರುವುದರಿಂದ ಈ ಸಭೆಯನ್ನು ಮುಂದೂಡುವುದು ಅಥವಾ ಮರು ನಿಗದಿಪಡಿಸುವುದು ಮಹತ್ವದ ನಿರ್ಧಾರವಾಗಲಿದೆ. ಕೃಷಿ ಮತ್ತು ಡೈರಿ ವಲಯಗಳಂತಹ ಪ್ರಮುಖ ವಲಯಗಳಲ್ಲಿ ಹೆಚ್ಚಿನ ಮಾರುಕಟ್ಟೆ ಪ್ರವೇಶಕ್ಕಾಗಿ ಅಮೆರಿಕ ಒತ್ತಾಯಿಸುತ್ತಿದೆ. ಆದರೆ ಇದು ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುವುದರಿಂದ ಭಾರತ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರೈತರು ಮತ್ತು ಜಾನುವಾರು ಸಾಕಣೆದಾರರ ಹಿತಾಸಕ್ತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭಾರತ ಹೇಳಿದೆ.

2025ರ ಸೆಪ್ಟೆಂಬರ್​-ಅಕ್ಟೋಬರ್ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಮುಕ್ತಾಯಗೊಳಿಸುವುದಾಗಿ ಅಮೆರಿಕ ಮತ್ತು ಭಾರತ ಈಗಾಗಲೇ ಪ್ರಕಟಿಸಿವೆ. ಎರಡೂ ದೇಶಗಳು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ 191 ಬಿಲಿಯನ್ ಡಾಲರ್‌ನಿಂದ 500 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿವೆ. ಆಗಸ್ಟ್ 7ರಿಂದ ಅಮೆರಿಕಕ್ಕೆ ಪ್ರವೇಶಿಸುವ ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ಜಾರಿಗೆ ಬಂದಿದೆ. ಇದೀಗ ಮತ್ತೆ ರಷ್ಯಾದಿಂದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ವಿಧಿಸಲಾಗಿದ್ದು, ಆಗಸ್ಟ್ 27 ರಿಂದ ಇದು ಜಾರಿಗೆ ಬರಲಿದೆ. ವಾಣಿಜ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ಏಪ್ರಿಲ್ - ಜುಲೈ ಅವಧಿಯಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಶೇ. 21.64ರಷ್ಟು ಹೆಚ್ಚಾಗಿ 33.53 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದರೆ, ಆಮದು ಶೇ. 12.33ರಷ್ಟು ಏರಿಕೆಯಾಗಿ 17.41 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2025-26ರ ಏಪ್ರಿಲ್ - ಜುಲೈ ಅವಧಿಯಲ್ಲಿ (ಯುಎಸ್‌ಡಿ 12.56 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರ) ಅಮೆರಿಕವು ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿತ್ತು.

Category
ಕರಾವಳಿ ತರಂಗಿಣಿ