ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಉಳಿಸಿಕೊಂಡಿರುವ 18 ತಿಂಗಳ ತುಟ್ಟಿಭತ್ಯೆಯನ್ನು ನೀಡುವ ಕುರಿತು ಕೇಂದ್ರ ಸರ್ಕಾರವು ಮಹತ್ವದ ಮಾಹಿತಿ ಹಂಚಿಕೊಂಡಿದೆ. "ನೌಕರರಿಗೆ ತುಟ್ಟಿ ಭತ್ಯೆ ನೀಡುವ ಕುರಿತು ಕೇಂದ್ರ ಸರ್ಕಾರವು ಯಾವುದೇ ಗಡುವು ಹಾಕಿಕೊಂಡಿಲ್ಲ" ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕೇಂದ್ರ ನೌಕರರಿಗೆ ನಿರಾಸೆಯಾದಂತಾಗಿದೆ. ಬಾಕಿ ಇರುವ ತುಟ್ಟಿ ಭತ್ಯೆಯನ್ನು ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಯಾವುದಾದರೂ ಗಡುವಿದೆಯೇ ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪಂಕಜ್ ಚೌಧರಿ ಉತ್ತರ ನೀಡಿದ್ದಾರೆ. "ಕೊರೊನಾ ಬಿಕ್ಕಟ್ಟಿನ ವೇಳೆ ಕೇಂದ್ರ ಸರ್ಕಾರವು ಜನರಿಗಾಗಿ ವಿವಿಧ ಯೋಜನೆ ರೂಪಿಸಿತು. ಇದೇ ವೇಳೆ ಸರ್ಕಾರಕ್ಕೆ ಆರ್ಥಿಕ ಸಮಸ್ಯೆಯೂ ಆಯಿತು. ಹಾಗಾಗಿ, ತುಟ್ಟಿ ಭತ್ಯೆ ಬಾಕಿ ಉಳಿದಿದೆ. ಇದನ್ನು ನೀಡಲು ಸರ್ಕಾರಕ್ಕೆ ಯಾವುದೇ ಗಡುವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. 2020ರಿಂದ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆಯನ್ನು ನೀಡಿರಲಿಲ್ಲ. ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಸರ್ಕಾರಕ್ಕೆ ಆರ್ಥಿಕ ತೊಂದರೆ ಎದುರಾಗಿತ್ತು. ಅಲ್ಲದೆ, ಹಲವು ಜನಕಲ್ಯಾಣ ಯೋಜನೆಗಳನ್ನು ರೂಪಿಸಿದ್ದ ಕಾರಣದಿಂದಾಗಿ ತುಟ್ಟಿ ಭತ್ಯೆಯನ್ನು ನೀಡಲು ಆಗಿರಲಿಲ್ಲ. ಆದರೆ, ಕೇಂದ್ರ ಸರ್ಕಾರಿ ನೌಕರರು ಕೆಲ ವರ್ಷಗಳಿಂದ ಬಾಕಿ ತುಟ್ಟಿ ಭತ್ಯೆ ನೀಡುವಂತೆ ಒತ್ತಾಯಿಸುತ್ತಲೇ ಇದ್ದಾರೆ. ಸಾರ್ವಜನಿಕ ವಲಯದ ನೌಕರರು ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ಇದನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಸರ್ಕಾರಿ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ನೀಡಲಾಗುತ್ತದೆ.