ಮಹಾರಾಷ್ಟ್ರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡುತ್ತಿರುವ ನಡುವೆ, I.N.D.I.A ಕೂಟದ ಭಾಗವಾದ ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮತ್ತೊಂದು ಅಚ್ಚರಿಯ ಅಂಶವನ್ನು ಬಹಿರಂಗಪಡಿಸಿದ್ದಾರೆ. 2024 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಿ, 288 ಕ್ಷೇತ್ರಗಳ ಪೈಕಿ 160 ಸ್ಥಾನ ಗೆಲ್ಲಿಸಿಕೊಡುವುದಾಗಿ 'ಗ್ಯಾರಂಟಿ' ನೀಡಿದ್ದರು ಎಂದು ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ನಾಗ್ಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ಇದಕ್ಕೆ ಜೋಡಣೆಯಾಗಿ ಒಂದು ಘಟನೆ ನಡೆಯಿತು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಆಗಮಿಸಿ, ಚುನಾವಣೆ ಗೆಲ್ಲಿಸಿಕೊಡುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ.
ಮಹಾರಾಷ್ಟ್ರದ 288 ಸ್ಥಾನಗಳ ಪೈಕಿ 160 ಸ್ಥಾನಗಳಲ್ಲಿ ವಿಪಕ್ಷಗಳ ಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಗೆಲುವು ಸಾಧಿಸುವಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ನಾವು ನೆರವು ನೀಡುವುದಾಗಿ ತಿಳಿಸಿದ್ದರು ಎಂದು ಕೇಂದ್ರದ ಮಾಜಿ ಸಚಿವರು ಹೇಳಿದ್ದಾರೆ. ಇದನ್ನು ಕೇಳಿದ ಬಳಿಕ ಅಚ್ಚರಿಗೆ ಒಳಗಾಗಿ, ನಾನು ಅವರನ್ನು ರಾಹುಲ್ ಗಾಂಧಿ ಅವರ ಬಳಿಗೆ ಕರೆದೊಯ್ದೆ. ಇಬ್ಬರು ಅನಾಮಿಕರ ಮಾತನ್ನು ವಿಪಕ್ಷ ನಾಯಕ ನಿರ್ಲಕ್ಷಿಸಿದರು. ಈ ರೀತಿಯ ವಿಷಯಗಳಲ್ಲಿ ನಾವು ಭಾಗಿಯಾಗುವುದಿಲ್ಲ. ಚುನಾವಣೆ ಮೂಲಕ ಜನರ ಬಳಿಗೆ ತೆರಳಿ ಜನಾದೇಶ ಪಡೆಯುತ್ತೇವೆ ಎಂದು ಅವರ ನೀಡಿದ್ದ ಗ್ಯಾರಂಟಿಯನ್ನು ನಿರಾಕರಿಸಿದರು ಎಂದು ಶರದ್ ಪವಾರ್ ತಿಳಿಸಿದ್ದಾರೆ. ಕೇಂದ್ರದ ಮಾಜಿ ಸಚಿವರೂ ಆಗಿರುವ ಎನ್ಸಿಪಿ ಮುಖ್ಯಸ್ಥರು ಪ್ರಸ್ತಾಪಿಸಿದ ಆ ಇಬ್ಬರು ಅನಾಮಿಕ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಅಂದು ಅವರು ನೀಡಿದ ಭರವಸೆ ಟೊಳ್ಳು ಎಂದು ತಿಳಿದು ಅವರ ಹೆಸರು ಮತ್ತು ಸಂಪರ್ಕ ವಿವರಗಳನ್ನು ಪಡೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎನ್ಸಿಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿಯು ಅಮೋಘ ಜಯಭೇರಿ ಬಾರಿಸಿತು. 288 ಸ್ಥಾನಗಳ ಪೈಕಿ ಬಿಜೆಪಿ ಏಕಾಂಗಿಯಾಗಿ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿ ಕ್ರಮವಾಗಿ 57 ಮತ್ತು 41 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಮೈತ್ರಿಕೂಟವು 230 ಸ್ಥಾನಗಳನ್ನು ಪಡೆದುಕೊಂಡು ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿಯನ್ನು ಧೂಳೀಪಟ ಮಾಡಿತು. ಭಾರೀ ಅಂತರದಲ್ಲಿ ಜಯಗಳಿಸಿದ ಬಳಿಕ ಖ್ಯಾತೆ ತೆಗೆದ ಕಾಂಗ್ರೆಸ್ ಚುನಾವಣೆಯಲ್ಲಿ ಇವಿಎಂಗಳ ವ್ಯತ್ಯಾಸ ಮತ್ತು ಮತಗಳ್ಳತನ ನಡೆದಿದೆ ಎಂದು ಆರೋಪಿಸುತ್ತಿದೆ.