ನವದೆಹಲಿ: ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕ ವಿಧಿಸಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಆಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಾರ್ಷಿಕ 23ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಗೆ ಭಾರತಕ್ಕೆ ಆಗಮಿಸುವಂತೆ ಪುಟಿನ್ ಅವರನ್ನು ಆಹ್ವಾನಿಸಿದ್ದಾರೆ. "ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರೊಂದಿಗೆ ಬಹಳ ಉತ್ತಮ ಮತ್ತು ವಿವರವಾದ ಸಂಭಾಷಣೆ ನಡೆಸಿದೆ. ಉಕ್ರೇನ್ನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹಂಚಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದ್ದೇನೆ. ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯ ಬಗ್ಗೆ ನಾವು ಪರಿಶೀಲಿಸಿದ್ದೇವೆ. ಭಾರತ-ರಷ್ಯಾ ನಡುವಿನ ವಿಶೇಷ, ಸವಲತ್ತುಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಆಗಮಿಸುವ ಪುಟಿನ್ ಅವರ ಆತಿಥ್ಯ ವಹಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಷ್ಯಾದ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50ರಷ್ಟು ಸುಂಕ ವಿಧಿಸಿದ ಬಳಿಕ ಉಂಟಾಗಿರುವ ಉದ್ವಿಗ್ನತೆಯ ನಡುವೆ ಈ ಪ್ರಮುಖ ಬೆಳವಣಿಗೆ ನಡೆದಿದೆ. ಅಲ್ಲದೆ, ಸದ್ಯ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರು ರಷ್ಯಾ ಪ್ರವಾಸದಲ್ಲಿದ್ದಾರೆ. ಪುಟಿನ್ ಗುರುವಾರ ಕ್ರೆಮ್ಲಿನ್ನಲ್ಲಿ ದೋವಲ್ ಅವರನ್ನು ಬರಮಾಡಿಕೊಂಡಿದ್ದರು. ಪುಟಿನ್ ಜೊತೆ ನೇರವಾಗಿ ಮಾತುಕತೆ ನಡೆಸುವ ಮೋದಿ ಅವರ ನಿರ್ಧಾರವು, ತನ್ನ ಸಾರ್ವಭೌಮ ಇಂಧನ ಆಯ್ಕೆಗಳ ಮೇಲಿನ ಅಮೆರಿಕದ ಒತ್ತಡಕ್ಕೆ ಸಂಪೂರ್ಣವಾಗಿ ಮಣಿಯಲು ಭಾರತ ನಿರಾಕರಿಸಿರುವ ಸೂಚನೆಯಾಗಿದೆ. ತೈಲ ಪೂರೈಕೆಯಲ್ಲಿ ರಷ್ಯಾ ಪ್ರಮುಖ ದೀರ್ಘಕಾಲೀನ ಪಾಲುದಾರನಾಗಿರುವ ಭಾರತದ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೆ, ಭಾರತೀಯ ವಿದೇಶಾಂಗ ನೀತಿಯ ಪ್ರಮುಖ ತತ್ವವಾಗಿ ಕಾರ್ಯತಂತ್ರದ ಸ್ವಾಯತ್ತತೆಯನ್ನು ಪ್ರತಿಪಾದಿಸುವ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಕ್ಷಣಾ ಸಹಕಾರ ಮತ್ತು ಇಂಧನ ವ್ಯಾಪಾರದಲ್ಲಿ ನೆಲೆಗೊಂಡಿರುವ ಭಾರತ-ರಷ್ಯಾ ಸಂಬಂಧವು ಮೂಲಸೌಕರ್ಯ, ಪರಮಾಣು ಶಕ್ತಿ ಮತ್ತು ತಾಂತ್ರಿಕ ಸಹಯೋಗದತ್ತ ಹೆಚ್ಚೆಚ್ಚು ವಿಸ್ತರಿಸುತ್ತಿದೆ. ಎರಡೂ ದೇಶಗಳು ಹಂಚಿಕೆಯ ಮತ್ತು ಸವಲತ್ತು ಪಡೆಯುವ ಕಾರ್ಯತಂತ್ರದ ಪಾಲುದಾರಿಕೆಯು ಈಗಿನ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯಿಂದ ದ್ವಿಪಕ್ಷೀಯ ಸಂಬಂಧಗಳನ್ನು ದೂರ ಇರಿಸುವ ಪರಸ್ಪರರ ಉದ್ದೇಶವನ್ನು ಒತ್ತಿಹೇಳುತ್ತದೆ. ಈ ಹಿಂದೆ ಪ್ರಧಾನಿ ಮೋದಿ ಕಳೆದ ವರ್ಷ ರಷ್ಯಾಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಹತ್ವದ ಚರ್ಚೆ ನಡೆಸಿದ್ದರು. ಇದು ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ನಂಬಿಕೆ ಮತ್ತು ಕಾರ್ಯತಂತ್ರದ ಪ್ರಮುಖ ಭಾಗವಾಗಿತ್ತು. ಪ್ರಧಾನಿ ಮೋದಿ ಈ ತಿಂಗಳ 31ರಂದು ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಲಿದ್ದಾರೆ. ಶೃಂಗಸಭೆ ನಡೆಯಲಿರುವ ಟಿಯಾಂಜಿನ್ಗೆ ಸೆಪ್ಟೆಂಬರ್ 1ರಂದು ಅವರು ತಲುಪಲಿದ್ದಾರೆ. ಶೃಂಗಸಭೆಯ ಭಾಗವಾಗಿ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮೆರಿಕದ ಸುಂಕ ಪ್ರಹಾರದ ನಡುವೆ ಭಾರತ, ಚೀನಾ ಮತ್ತು ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಭದ್ರವಾಗುತ್ತಿದ್ದು, ಜಗತ್ತಿನ ಗಮನ ಸೆಳೆಯುತ್ತಿದೆ.