image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಉಪರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ

ಉಪರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ

ನವದೆಹಲಿ: ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಅಧಿಸೂಚನೆಯ ಪ್ರಕಾರ, ಆಗಸ್ಟ್ 21 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಆಗಸ್ಟ್ 22ರಂದು ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನಾಮಪತ್ರ ಹಿಂಪಡೆಯಲು ಆಗಸ್ಟ್ 25 ಕೊನೆಯ ದಿನವಾಗಿದೆ. ಜುಲೈ 21ರಂದು ಜಗದೀಪ್ ಧನಕರ್ ಅವರು ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ ನಂತರ ಈ ಹುದ್ದೆ ತೆರವಾಗಿದೆ. ಧನಕರ್ ಅಧಿಕಾರಾವಧಿ ಆಗಸ್ಟ್ 2027ರಲ್ಲಿ ಕೊನೆಗೊಳ್ಳಬೇಕಿತ್ತು. ಪ್ರತಿಪಕ್ಷಗಳು ಧನಕರ್​​ ರಾಜೀನಾಮೆಯ ಹಿಂದೆ ಬೇರೆಯದ್ದೇ ಕಾರಣವಿದೆ ಎಂದು ಅನುಮಾನಿಸಿದ್ದವು. ಆದರೆ ಆಡಳಿತ ಪಕ್ಷದ ಸಂಸದರು ಹಾಗೇನಿಲ್ಲ, ಧನಕರ್​ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ಇನ್ನೊಂದೆಡೆ ಪ್ರಧಾನಿ ಮೋದಿ ಅವರ ಚುಟುಕಾದ ಎಕ್ಸ್ ಪೋಸ್ಟ್​ ಸಹ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಉಪರಾಷ್ಟ್ರಪತಿಯೊಬ್ಬರು ಅಧಿಕಾರದಲ್ಲಿರುವಾಗಲೇ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ಪದಚ್ಯುತಿಗೊಂಡರೆ, ಮುಂದಿನ ವ್ಯಕ್ತಿಯನ್ನು ಹುದ್ದೆಗೆ ಆಯ್ಕೆ ಮಾಡುವ ಚುನಾವಣೆಯನ್ನು ಸಾಧ್ಯವಾದಷ್ಟು ಬೇಗ ನಡೆಸಬೇಕು ಎಂದು ಸಂವಿಧಾನ ಹೇಳುತ್ತದೆ. ಸಾಂವಿಧಾನಿಕ ನಿಯಮಗಳ ಪ್ರಕಾರ, ಮುಂದೆ ಯಾರು ಈ ಸ್ಥಾನ ಅಲಂಕರಿಸುತ್ತಾರೋ ಅವರು ಮುಂದಿನ ಪೂರ್ಣ ಐದು ವರ್ಷಗಳ ಅಧಿಕಾರಾವಧಿ ಪಡೆಯುತ್ತಾರೆ. ಭಾರತದ ಉಪರಾಷ್ಟ್ರಪತಿಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯರು ಸೇರಿ ಆಯ್ಕೆ ಮಾಡುತ್ತಾರೆ. ನಾಮನಿರ್ದೇಶಿತ ಸದಸ್ಯರೂ ಸಹ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ದಿನದಿಂದ ಮತದಾನ ನಡೆಯುವ ದಿನದವರೆಗೆ 30 ದಿನಗಳ ಕಾಲಾವಕಾಶ ಇರುತ್ತದೆ.

Category
ಕರಾವಳಿ ತರಂಗಿಣಿ