ನ್ಯೂಯಾರ್ಕ್ : ನಾವು ರಷ್ಯಾದಿಂದ ಯುರೇನಿಯಂ, ರಸಗೊಬ್ಬರ ಮತ್ತು ರಾಸಾಯನಿಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ರಷ್ಯಾ ಜೊತೆಗೆ ನಾವು ವ್ಯಾಪಾರ ಮಾಡಬಾರದು ಎಂದು ತಾಕೀತು ಮಾಡುತ್ತಿರುವ ಅಮೆರಿಕ, ಅದೇ ರಷ್ಯಾದಿಂದ ಈ ಎಲ್ಲಾ ಸರಕುಗಳ ಆಮದು ಮಾಡಿಕೊಳ್ಳುತ್ತಿದೆ ಎಂಬ ಭಾರತದ ತೀಕ್ಷ್ಣ ಪ್ರತಿಕ್ರಿಯೆಯ ಬೆನ್ನಲ್ಲೇ ಟ್ರಂಪ್ ಹೇಳಿಕೆ ಗಮನ ಸೆಳೆದಿದೆ. ಈ ಕುರಿತು ನನಗೆ ತಿಳಿದಿಲ್ಲ, ಪರಿಶೀಲಿಸಲಾಗುವುದು. ರಷ್ಯಾದಿಂದ ಇಂಧನ ಕೊಳ್ಳುತ್ತಿರುವ ದೇಶಗಳ ಮೇಲೆ ಎಷ್ಟು ಪ್ರಮಾಣದಲ್ಲಿ ಸುಂಕ ಜಾರಿ ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ. ರಷ್ಯಾದಿಂದ ಇಂಧನ ಖರೀದಿಸುತ್ತಿರುವ ಚೀನಾ ಸೇರಿದಂತೆ ಎಲ್ಲ ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಬೆದರಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ಎಷ್ಟು ಶೇಕಡಾ ಸುಂಕ ವಿಧಿಸುತ್ತೇವೆ ಎಂದು ನಾವು ತಿಳಿಸಿಲ್ಲ. ಆದರೆ, ದೊಡ್ಡ ಪ್ರಮಾಣದಲ್ಲಿ ಸುಂಕ ಹಾಕುತ್ತೇವೆ, ನೋಡೋಣ ಎಂದು ತಿಳಿಸಿದರು.