ನವದೆಹಲಿ: ಭಾರತೀಯ ಸೇನೆಯ ಬಗ್ಗೆ ಸಹೋದರ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾದ ಭಾರತೀಯ ಯಾರು ಎಂಬುದನ್ನು ನಿರ್ಧರಿಸುವುದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಗೌರವ ಸಲ್ಲಿಸುತ್ತಾ, ನಿಜವಾದ ಭಾರತೀಯ ಯಾರು ಎಂಬುದನ್ನು ಅವರು ನಿರ್ಧರಿಸುವುದಿಲ್ಲ. ಇದು ವಿರೋಧ ಪಕ್ಷದ ನಾಯಕನ ಕೆಲಸ, ಪ್ರಶ್ನೆಗಳನ್ನು ಕೇಳುವುದು ಮತ್ತು ಸರ್ಕಾರಕ್ಕೆ ಸವಾಲು ಹಾಕುವುದು ಅವರ ಕರ್ತವ್ಯ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಸಂಸತ್ ಭವನದ ಸಂಕೀರ್ಣದಲ್ಲಿ ಮಾಧ್ಯಮಗಳಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿಗೆ ಸೇನೆಯ ಬಗ್ಗೆ ಅತ್ಯುನ್ನತ ಗೌರವವಿದೆ ಮತ್ತು ಅದರ ವಿರುದ್ಧ ಎಂದಿಗೂ ಏನನ್ನೂ ಹೇಳುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು ರಾಹುಲ್ ಗಾಂಧಿ ಅವರ ಕರ್ತವ್ಯ ಎಂದು ಅವರು ಇದೇ ವೇಳೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಡಿಸೆಂಬರ್ 2022 ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲಖನೌ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಒಂದು ದಿನದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ವಿಚಾರಣೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್ ಇದೇ ವೇಳೆ ರಾಹುಲ್ ಹೇಳಿಕೆ ಸರಿಯಲ್ಲ ಎಂದಿದ್ದು, ನಿಜವಾದ ಭಾರತೀಯರಾಗಿದ್ದರೆ ಅಂತಹ ಮಾತನ್ನು ಹೇಳುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ನನ್ನ ಸಹೋದರ ಎಂದಿಗೂ ಸೇನೆಯ ವಿರುದ್ಧ ಏನನ್ನೂ ಹೇಳುವುದಿಲ್ಲ. ಅವರು ಸೇನೆಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಆದ್ದರಿಂದ ಇದು (ಅವರ ಹೇಳಿಕೆಗಳ) ತಪ್ಪು ವ್ಯಾಖ್ಯಾನವಾಗಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಮತ್ತೊಂದು ಕಡೆ ರಾಹುಲ್ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ. ಚೀನಾ ಬಲಪಡಿಸಲು ರಾಹುಲ್ ಪ್ರತಿಜ್ಞೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ. ಇಂಡಿ ಒಕ್ಕೂಟ ರಾಹುಲ್ ಗೆ ಬೆಂಬಲ ನೀಡಿವೆ. ರಾಹುಲ್ ವಿರುದ್ಧ ಸುಪ್ರೀಂ ಕೋರ್ಟ್ ಮಾಡಿರುವ ಅವಲೋಕನಗಳನ್ನು "ಅನಗತ್ಯ" ಎಂದು ಕರೆದಿವೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಇಂಡಿ ಒಕ್ಕೂಟ ಪ್ರತಿಪಾದಿಸಿದೆ.