image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಚೀನಾ ಕುರಿತು ಹೇಳಿಕೆ : ರಾಹುಲ್​ ಗಾಂಧಿಗೆ ಸುಪ್ರೀಂಕೋರ್ಟ್​ ತರಾಟೆ

ಚೀನಾ ಕುರಿತು ಹೇಳಿಕೆ : ರಾಹುಲ್​ ಗಾಂಧಿಗೆ ಸುಪ್ರೀಂಕೋರ್ಟ್​ ತರಾಟೆ

ನವದೆಹಲಿ: 'ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ' ಎಂಬ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ಇಂತಹ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಶ್ನಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವುದೇಕೆ? ಎಂದು ಕೇಳಿದೆ. "ನಿಮ್ಮ ಬಳಿ ಪುರಾವೆಗಳಿವೆಯೇ? ಯಾವುದೇ ಸಾಕ್ಷ್ಯಗಳಿಲ್ಲದೇ ಇಂತಹ ಹೇಳಿಕೆಗಳನ್ನು ಯಾಕೆ ನೀಡುತ್ತೀರಿ? ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನೆಲ್ಲಾ ಹೇಳುವುದಿಲ್ಲ" ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ. ಮಸಿಹ್ ಅವರಿದ್ದ ಪೀಠವು ವಿಪಕ್ಷ ನಾಯಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾರತ್​ ಜೋಡೋ ಯಾತ್ರೆಯಲ್ಲಿ 2020 ರಲ್ಲಿ ನಡೆದ ಗಲ್ವಾನ್​ ಕಣಿವೆ ಸಂಘರ್ಷದಲ್ಲಿ ಭಾರತೀಯ ಯೋಧರನ್ನು ಹೊಡೆದು ಸಾಯಿಸಲಾಗಿದೆ. ಭಾರತದ 2 ಸಾವಿರ ಕಿ.ಮೀ. ಭೂಮಿಯನ್ನು ಚೀನೀಯರು ವಶಕ್ಕೆ ಪಡೆದಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದರು. ಇದರ ವಿರುದ್ಧ ಲಕ್ನೋದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.

ಈ ಕುರಿತು ನಡೆದ ವಿಚಾರಣೆಯಲ್ಲಿ ಲಕ್ನೋ ಕೋರ್ಟ್​ ರಾಹುಲ್​ ಗಾಂಧಿಗೆ ಸಮನ್ಸ್ ನೀಡಿತ್ತು. ಇದನ್ನು ಅಲಹಾಬಾದ್​ ಹೈಕೋರ್ಟ್​ ಎತ್ತಿಹಿಡಿದಿತ್ತು. ಇದರ ವಿರುದ್ಧ ಕಾಂಗ್ರೆಸ್​ ನಾಯಕ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಭೂಮಿ ನಷ್ಟವಾಗಿದ್ದು ನಿಮಗೇ ಹೇಗೆ ಗೊತ್ತು? ಈ ಕುರಿತು ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂಕೋರ್ಟ್​, ಚೀನಾ ಭಾರತದ 2 ಸಾವಿರ ಕಿಲೋ ಮೀಟರ್​ ಭೂಮಿಯನ್ನು ವಶಕ್ಕೆ ಪಡೆದಿದೆ ಎಂಬುದು ನಿಮಗೆ ಹೇಗೆ ಗೊತ್ತು?. ಈ ಕುರಿತು ನಿಮ್ಮ ಬಳಿ ದಾಖಲೆಗಳಿವೆಯೇ?. ಇದ್ದಲ್ಲಿ ನೀವು ಅದನ್ನು ಸಂಸತ್ತಿನಲ್ಲಿ ಏಕೆ ಪ್ರಶ್ನಿಸಿಲ್ಲ ಎಂದು ರಾಹುಲ್​ ಗಾಂಧಿಗೆ ಸಾಲು ಸಾಲು ಪ್ರಶ್ನೆ ಕೇಳಿದೆ. ಕಾಂಗ್ರೆಸ್​ ನಾಯಕನ ಪರ ಹಿರಿಯ ವಕೀಲ ಎ.ಎಂ. ಸಿಂಘ್ವಿ ವಾದಿಸಿ, ನನ್ನ ಕಕ್ಷಿದಾರರು ವಿಪಕ್ಷ ನಾಯಕರಾಗಿದ್ದಾರೆ. ಅವರು ದೇಶದ ಯಾವುದೇ ವಿಷಯದ ಮೇಲೆ ಪ್ರಶ್ನೆ ಎತ್ತುವ ಹಕ್ಕು ಹೊಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಈ ವೇಳೆ ಕೋರ್ಟ್​, ಇದನ್ನು ಸಂಸತ್ತಿನಲ್ಲಿ ಹೇಳಬಹುದಲ್ಲಾ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಹಾಕುವುದೇಕೆ ಎಂದು ಪ್ರಶ್ನಿಸಿತು. ಜೊತೆಗೆ, ನೀವು ಹೇಳುವಂತೆ ಚೀನಾವು 2 ಸಾವಿರ ಕಿ.ಮೀ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆಗಳಿವೆಯಾ. ಇಲ್ಲದೇ ಹೋದಲ್ಲಿ ಹೇಳಿಕೆ ನೀಡಿದ್ದೇಕೆ? ಅಷ್ಟಕ್ಕೂ ಇದು ನಿಮಗೆ ಹೇಗೆ ತಿಳಿಯಿತು. ನೀವು ನಿಜವಾದ ಭಾರತೀಯರಾಗಿದ್ದರೆ, ಇಂತಹ ಹೇಳಿಕೆಯನ್ನು ನೀಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು. ಜೊತೆಗೆ, ಈ ಕುರಿತ ವಿಚಾರಣೆಯನ್ನು ರದ್ದು ಮಾಡಲು ನಿರಾಕರಿಸಿತಲ್ಲದೇ, ನೋಟಿಸ್​​ ಕೂಡ ಜಾರಿ ಮಾಡಿತು.

Category
ಕರಾವಳಿ ತರಂಗಿಣಿ