ನವದೆಹಲಿ: ರಷ್ಯಾದಿಂದ ತೈಲ ಖರೀದಿ ಹಿಂದಿನಂತೆಯೇ ಮುಂದುವರಿಸಲಾಗಿದೆ ಎಂದು ಭಾರತ ಸ್ಪಷ್ಟನೆ ನೀಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗೆ ದಿಟ್ಟ ತಿರುಗೇಟು ನೀಡಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, "ರಷ್ಯಾದೊಂದಿಗಿನ ನಮ್ಮ ಸಂಬಂಧವು ಸ್ಥಿರ ಮತ್ತು ಸಮಯೋಚಿತವಾಗಿದೆ. ಇದನ್ನು ಮೂರನೇ ರಾಷ್ಟ್ರದ ದೃಷ್ಟಿಕೋನದ ಮೂಲಕ ನೋಡಲು ಸಾಧ್ಯವಿಲ್ಲ" ಎಂದು ಹೇಳಿದೆ. ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿರುವ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿಲ್ಲ. ಜಾಗತಿಕ ಪರಿಸ್ಥಿತಿಗಳು ಮತ್ತು ಮಾರುಕಟ್ಟೆಯಲ್ಲಿ ತೈಲ ಲಭ್ಯತೆ ಅನುಸಾರ ಭಾರತವು ತನ್ನ ತೈಲ ಅಗತ್ಯವನ್ನು ಪೂರೈಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಉಕ್ರೇನ್ ಮೇಲೆ ದಾಳಿ ನಿಲ್ಲಿಸಲು ಅಮೆರಿಕ ಸೂಚಿಸಿದ ಹೊರತಾಗಿಯೂ ರಷ್ಯಾ ದಾಳಿ ಮುಂದುವರಿಸಿದೆ. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಕೆಂಪಾಗಿಸಿದೆ. ಇದರಿಂದ ರಷ್ಯಾದ ಮೇಲೆ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ರಷ್ಯಾದ ಅತ್ಯಧಿಕ ತೈಲ ಖರೀದಿಸುವ ಭಾರತ ಮತ್ತು ಚೀನಾಕ್ಕೆ ಅಧಿಕ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ತಕ್ಷಣವೇ ಭಾರತವು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿರುವ ಟ್ರಂಪ್, ಭಾರತದ ಜೊತೆ ಅಮೆರಿಕದ ವ್ಯಾಪಾರ ಕಡಿಮೆಯೇ ಇದೆ. ಶಸ್ತ್ರಾಸ್ತ್ರಗಳನ್ನು ಅದು (ಭಾರತ) ರಷ್ಯಾದಿಂದಲೇ ಹೆಚ್ಚಾಗಿ ಖರೀದಿಸುತ್ತದೆ. ಇನ್ನು ಮುಂದೆ ಭಾರತದ ವಸ್ತುಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ವಿಧಿಸುವುದಾಗಿ ಪ್ರಕಟಿಸಿದ್ದರು. 2022 ರ ಜನವರಿಯಲ್ಲಿ ಭಾರತ ರಷ್ಯಾದಿಂದ ದಿನಕ್ಕೆ 68 ಸಾವಿರ ಬ್ಯಾರಲ್ ಕಚ್ಚಾ ತೈಲವನ್ನು ಖರೀದಿಸಿತ್ತು. ಅದೇ ವರ್ಷದ ಜೂನ್ ವೇಳೆಗೆ ತೈಲ ಆಮದು ದಿನಕ್ಕೆ 1.12 ಮಿಲಿಯನ್ ಬ್ಯಾರಲ್‌ಗಳಿಗೆ ಏರಿತು. 2023 ಮೇ ತಿಂಗಳಿಗೆ ದೈನಂದಿನ ಆಮದು 2.15 ಮಿಲಿಯನ್‌ಗೆ ತಲುಪಿತು ಮತ್ತು ಅಂದಿನಿಂದ ಅದು ಮುಂದುವರಿದಿದೆ. ಪ್ರಸ್ತುತ ರಷ್ಯಾವು ಭಾರತದ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಶೇ.40 ರಷ್ಟು ತೈಲ ಸರಬರಾಜಾಗುತ್ತಿದೆ ಎಂದು ಡೇಟಾ ವಿಶ್ಲೇಷಣಾ ಕಂಪನಿಯಾದ ಕೆಪ್ಲರ್ ಮಾಹಿತಿ ಹಂಚಿಕೊಂಡಿತ್ತು. ಭಾರತದ ದೈನಂದಿನ ತೈಲ ಬಳಕೆಯು ಸುಮಾರು 5.5 ಮಿಲಿಯನ್ ಬ್ಯಾರಲ್‌ಗಳೆಂದು ಅಂದಾಜಿಸಲಾಗಿದೆ. ಇದರಲ್ಲಿ ಶೇಕಡಾ 88 ರಷ್ಟನ್ನು ಆಮದಿನ ಮೂಲಕವೇ ಪೂರೈಸಲಾಗುತ್ತದೆ. ದೇಶವು ಈ ಹಿಂದಿನಿಂದಲೂ ತನ್ನ ಹೆಚ್ಚಿನ ಕಚ್ಚಾ ತೈಲವನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಖರೀದಿಸುತ್ತಿತ್ತು. ಆದರೆ, 2022 ರಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ಅದರ ಮೇಲೆ ನಿರ್ಬಂಧ ವಿಧಿಸಿದ್ದವು. ಈ ವೇಳೆ ರಷ್ಯಾ ತನ್ನ ತೈಲವನ್ನು ಕಡಿಮೆ ದರದಲ್ಲಿ ಭಾರತಕ್ಕೆ ಮಾರಾಟ ಮಾಡುತ್ತಿದೆ. ಚೀನಾ ಕೂಡ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ.