ವಾರಣಾಸಿ: ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಭರವಸೆಯನ್ನು ಆಪರೇಷನ್ ಸಿಂಧೂರ್ ಮೂಲಕ ಶಿವನ ಆಶೀರ್ವಾದದಿಂದ ಪೂರ್ಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ತಮ್ಮ ಸಂಸದೀಯ ಕ್ಷೇತ್ರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ. ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ, 26ಜನರನ್ನು ಹತ್ಯೆ ನಡೆಸಿದಾಗ ನನ್ನ ಹೃದಯ ನೋವಿನಲ್ಲಿ ಮುಳುಗಿತ್ತು. ಆ ಮಹಾದೇವನ ಆಶೀರ್ವಾದದೊಂದಿಗೆ ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿರ್ಧಾರ ನಡೆಸಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ಸನ್ನು ನಾನು ಆ ಮಹಾದೇವನ ಪಾದಕ್ಕೆ ಸಮರ್ಪಿಸುತ್ತೇನೆ ಎಂದ ಪ್ರಧಾನಿ, ಈ ಆಪರೇಷನ್ ಸಿಂಧೂರದಲ್ಲಿ 140 ಕೋಟಿ ದೇಶವಾಸಿಗಳ ಒಗ್ಗಟ್ಟಿನ ಬಲವು ಇದೆ ಎಂದರು. 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಪ್ರಾರಂಭವಾದಾಗ ಸಮಾಜವಾದಿ ಪಕ್ಷ, ಕಾಂಗ್ರೆಸ್ ನಂತಹ ಅಭಿವೃದ್ಧಿ ವಿರೋಧಿ ಗುಂಪುಗಳು ವದಂತಿಗಳನ್ನು ಹರಡಿದವು. ಕೃಷಿ ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದು, 3 ಕೋಟಿ ಲಕ್ಪತಿ ದೀದಿ ಮಾಡುತ್ತೇವೆ.
ಆಪರೇಷನ್ ಸಿಂಧೂರ್ ಭಾರತದ ಉಗ್ರ ರೂಪವನ್ನು ಜಗತ್ತಿಗೆ ತೋರಿಸಿದೆ. ಭಾರತದ ಮೇಲೆ ದಾಳಿ ಮಾಡುವವರು ನರಕದಲ್ಲಿಯೂ ಬದುಕುಳಿಯುವುದಿಲ್ಲ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸುವುದನ್ನು ಕಾಂಗ್ರೆಸ್ ಮತ್ತು ಅದರ ಸ್ನೇಹಿತರು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಅದಕ್ಕಾಗಿಯೇ ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು. ನಮ್ಮ ಸರ್ಕಾರವು ದೇಶದ ಹಿತದೃಷ್ಟಿಯಿಂದ ತನ್ನಿಂದ ಸಾಧ್ಯವಾದಷ್ಟು ಎಲ್ಲವನ್ನೂ ಮಾಡುತ್ತಿದೆ. ದೇಶಕ್ಕೆ ಒಳಿತನ್ನು ಬಯಸುವವರು ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ನೋಡಲು ಬಯಸುವವರು, ಅದು ಯಾವುದೇ ರಾಜಕೀಯ ಪಕ್ಷವಾಗಿರಲಿ, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸ್ವದೇಶಿ ಉತ್ಪನ್ನಗಳ ಬಳಕೆಯ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಆಪರೇಷನ್ ಸಿಂಧೂರ್ ವೇಳೆ ಜಗತ್ತು ಭಾರತದ ದೇಶಿಯ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ನೋಡಿದೆ. ವಾಯು ರಕ್ಷಣೆ ವ್ಯವಸ್ಥೆ, ಡ್ರೋನ್ಗಳು, ವಿಶೇಷವಾಗಿ ಬ್ರಹ್ಮೋಸ್ನಂತಹ ಕ್ಷಿಪಣಿಗಳು ಆತ್ಮನಿರ್ಭರ್ ಭಾರತದ ಸಾಮರ್ಥ್ಯ ಸಾಬೀತು ಮಾಡಿದೆ. ಬ್ರಹ್ಮೋಸ್ ಕ್ಷಿಪಣಿಯಲ್ಲಿ ಇನ್ಮುಂದೆ ಲಕ್ನೋನಲ್ಲಿ ಉತ್ಪಾದನೆ ಮಾಡಲಾಗುವುದು. ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್ನಲ್ಲಿ ಅನೇಕ ಪ್ರಮುಖ ರಕ್ಷಣಾ ಘಟಕಗಳನ್ನು ತಯಾರಿಸಿ, ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡಲಾಗುವುದು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಶೀಘ್ರದಲ್ಲೇ ಭಾರತದ ಬಲವಾಗಿ ರೂಪುಗೊಳ್ಳಲಿದೆ ಎಂದರು. ಇದೇ ವೇಳೆ ವಿಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಭಯೋತ್ಪಾದಕರ ಪರಿಸ್ಥಿತಿ ನೋಡಿ ಪಾಕಿಸ್ತಾನ ಅಳುತ್ತಿದೆ. ಇಲ್ಲೂ ಕೂಡ ಕಾಂಗ್ರೆಸ್ ಮತ್ತು ಎಸ್ಪಿ ಕಣ್ಣೀರಿಡುತ್ತಿವೆ. ಕಾಂಗ್ರೆಸ್ ಆಪರೇಷನ್ ಸಿಂಧೂರವನ್ನು ತಮಾಷಾ ಎಂದು ಕರೆಯಿತು. ಹಾಗೇ ಶಸ್ತ್ರಾಸ್ತ್ರಗಳ ಬಲಗಳನ್ನು ಕುರಿತು ನಿರಂತವಾಗಿ ಅವಮಾನ ಮಾಡಿತು ಎಂದು ಟೀಕಿಸಿದರು.
ಪಹಲ್ಗಾಮ್ ಉಗ್ರರು ಯಾಕೆ ಅದೇ ದಿನ ಬಂದು ದಾಳಿ ನಡೆಸಿದರು ಎಂದು ಸಮಾಜವಾದಿ ಪಕ್ಷ ಪ್ರಶ್ನಿಸುತ್ತದೆ. ಯಾವುದಾದರು ಕ್ರಮ ನಡೆಸುವ ಮುನ್ನ ನಾನು ಅವರನ್ನು ಕರೆದು ಈ ಕುರಿತು ಕೇಳಬೇಕಾ? ಸಾಮಾನ್ಯಪ್ರಜ್ಞೆ ಹೊಂದಿದ್ದವರು ಇದಕ್ಕೆ ಉತ್ತರಿಸಲು ಸಾಧ್ಯವೇ? ಭಯೋತ್ಪಾದಕರನ್ನು ಕೊಲ್ಲಲು ಕಾಯಬೇಕಾ ಅಥವಾ ಓಡಿಹೋಗಲು ಅವಕಾಶ ನೀಡಬೇಕಾ ಎಂದು ಪ್ರಶ್ನಿಸಿದ್ದರು.