ನವದೆಹಲಿ: ವ್ಯಾಪಾರ ಒಪ್ಪಂದದ ಕುರಿತು ಭಾರತ ಜೊತೆ ನಿರಂತರ ಮಾತುಕತೆ ಸಾಗಿದೆ. ಆದರೆ ಭಾರತವು ಬ್ರಿಕ್ಸ್ ಗುಂಪಿನ ಸದಸ್ಯ ಆಗಿರುವುದರಿಂದ ಸುಂಕ ವಿಧಿಸಲು ಕಾರಣವಾಗಿದೆ ಎಂದು ಭಾರತದ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಭಾರತದ ಜೊತೆಗೆ ವ್ಯಾಪಾರ ಮಾತುಕತೆ ಸಾಗಿದ್ದು, ಏನಾಗುತ್ತದೆ ನೋಡೋಣ ಎಂದಿರುವ ಟ್ರಂಪ್,"ನಮ್ಮ ಮೇಲೆ ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವುತ್ತಿರುವ ದೇಶ ಭಾರತವಾಗಿದೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ. ಭಾರತದ ಮೇಲೆ ಅಮೆರಿಕ ವಿಧಿಸುತ್ತಿರುವ ಸುಂಕದ ದಂಡದ ಕುರಿತು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಭಾರತವು ಅಮೆರಿಕ ವಿರೋಧಿ ಬ್ರಿಕ್ಸ್ ಗುಂಪಿನ ಭಾಗವಾಗಿದ್ದು, ಈ ಗುಂಪಿನ ಮೈತ್ರಿ ಡಾಲರ್ ಮೇಲೆ ದಾಳಿ ನಡೆಸಿದೆ" ಎಂದು ಆರೋಪಿಸಿದ್ದಾರೆ. "ಇದೀಗ ನಾವು ಮಾತುಕತೆ ನಡೆಸುತ್ತಿದ್ದೇವೆ. ಬ್ರಿಕ್ಸ್ ಗುಂಪು ಅಮೆರಿಕ ವಿರೋಧಿ ದೇಶಗಳ ಗುಂಪಾಗಿದೆ. ಭಾರತ ಅದರ ಸದಸ್ಯವಾಗಿದೆ. ಈ ಮೈತ್ರಿ ಗುಂಪು ಡಾಲರ್ ಮೇಲೆ ದಾಳಿ ಮಾಡುತ್ತಿದೆ. ನಾವು ಡಾಲರ್ ಮೇಲೆ ಈ ದಾಳಿಯನ್ನು ಮಾಡಲು ಬಿಡುವುದಿಲ್ಲ. ಅಧಿಕ ಸುಂಕ ವಿಧಿಸುವಿಕೆಯಲ್ಲಿ ಭಾಗಶಃ ಬ್ರಿಕ್ಸ್ ಮತ್ತು ಭಾಗಶಃ ವ್ಯಾಪಾರವೂ ಸೇರಿದೆ" ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಕುರಿತು ಮತ್ತೆ ಒತ್ತಿ ಹೇಳಿದ ಟ್ರಂಪ್, "ನರೇಂದ್ರ ಮೋದಿ ತಮ್ಮ ಸ್ನೇಹಿತನಾಗಿದ್ದು, ಭಾರತ ಯುಎಸ್ ಒಪ್ಪಂದವು ಒಂದು ನಿರ್ದಿಷ್ಟ ಸುಂಕವನ್ನು ತಲುಪಿದರೆ ಇದು ಗಣನೆಗೆ ಬರುವುದಿಲ್ಲ. ಅವರು ನಮಗೆ ಸಾಕಷ್ಟು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಆದರೆ, ನಮ್ಮ ಜೊತೆಗೆ ಹೆಚ್ಚಿನ ವ್ಯಾಪಾರವನ್ನು ಅವರು ಹೊಂದಿಲ್ಲ. ನಮ್ಮಿಂದ ಏನೂ ಕೊಳ್ಳುವುದಿಲ್ಲ. ಕಾರಣ ಅಧಿಕ ಸುಂಕ. ಜಗತ್ತಿನಲ್ಲಿ ದುಬಾರಿ ಸುಂಕ ಅವರು ಹೊಂದಿದ್ದಾರೆ. ಇದೀಗ ಅವರು ಗಣನೀಯವಾಗಿ ಕಡಿತಗೊಳಿಸಲು ಸಿದ್ಧರಿದ್ದಾರೆ. ಭಾರತದೊಂದಿಗೆ ಮಾತನಾಡುತ್ತಿದ್ದೇವೆ" ಎಂದಿದ್ದಾರೆ. "ಮುಂದೆ ನೋಡೋಣ ಏನಾಗುತ್ತದೆ. ನಾವು ಒಪ್ಪಂದ ನಡೆಸುತ್ತೇವಾ ಅಥವಾ ಅವರಿಗೆ ಅಧಿಕ ಸುಂಕ ವಿಧಿಸುತ್ತೇವೇ ಎಂಬುದು ಮುಖ್ಯವಲ್ಲ. ಆಗಸ್ಟ್ 1ರಿಂದ ಅಮೆರಿಕದಲ್ಲಿ ಹಿಂದೆಂದೂ ನೋಡಿರದ ರೀತಿಯಲ್ಲಿ ಹಣದ ಸುರಿಮಳೆ ಆಗಲಿದೆ" ಎಂದರು. ತಮ್ಮ ಸಾಮಾಜಿಕ ಜಾಲತಾಣದ ಟ್ರೂಥ್ನಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ರಷ್ಯಾದಿಂದ ತೈಲ ಕೊಳ್ಳುತ್ತಿರುವ ಭಾರತದ ಮೇಲೆ ಹೆಚ್ಚುವರಿ ದಂಡವಾಗಿ ಶೇ 25ರಷ್ಟು ವ್ಯಾಪಾರ ಸುಂಕ ವಿಧಿಸಲಾಗುವುದು. ಇದು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು.