ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸಾವುನೋವು, ನಷ್ಟ ಉಂಟುಮಾಡಿದೆ. ಮಂಡಿ ನಗರದ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಐವರು ಕೊಚ್ಚಿ ಹೋಗಿದ್ದು, ಮೂವರ ಶವ ಸಿಕ್ಕಿದೆ. ಎರಡು ಶವಗಳು ವಾಹನದ ಮಧ್ಯೆ ಸಿಲುಕಿದ್ದು, ಎನ್ಡಿಆರ್ಎಫ್ ಪತ್ತೆ ಮಾಡಿದೆ. ಅವಶೇಷಗಳಲ್ಲಿ 60ಕ್ಕೂ ಹೆಚ್ಚು ವಾಹನಗಳು ಹೂತು ಹೋಗಿದ್ದು, ಹಲವು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ. ಎನ್ಡಿಆರ್ಎಫ್, ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಗೃಹರಕ್ಷಕ ಸಿಬ್ಬಂದಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಶಾಸಕ ಅನಿಲ್ ಶರ್ಮಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಜೈಲ್ ರಸ್ತೆ, ವಲಯ ಆಸ್ಪತ್ರೆ ರಸ್ತೆ ಮತ್ತು ಸೈನ್ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಕಿರಾತ್ಪುರ ಮನಾಲಿ ಚತುಷ್ಪಥ ಮತ್ತು ಪಠಾಣ್ಕೋಟ್ ಮಂಡಿ ರಾಷ್ಟ್ರೀಯ ಹೆದ್ದಾರಿ ಭೂಕುಸಿತದಿಂದ ಬಂದ್ ಆಗಿದೆ. ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ 4 ಮೈಲಿ, 9 ಮೈಲಿ, ದ್ವಾಡ, ಝಲೋಗಿ ಸೇರಿದಂತೆ ಹಲವೆಡೆ ಭೂಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಪಠಾಣ್ಕೋಟ್-ಮಂಡಿ ರಾಷ್ಟ್ರೀಯ ಹೆದ್ದಾರಿಯ ಪಧರ್ನಿಂದ ಮಂಡಿವರೆಗಿನ ಅನೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ ಕುರಿತು ವರದಿಯಾಗಿದೆ. ಭಾರಿ ಮಳೆ ಪರಿಹಾರ ಕಾರ್ಯಕ್ಕೆ ತೊಡಕುಂಟುಮಾಡಿದೆ. ಅವಶೇಷಗಳನ್ನು ಸ್ಥಳಾಂತರಿಸುವುದು ಸವಾಲಾಗಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ.
ಮಂಡಿ ನಗರದ ವಿಕ್ಟೋರಿಯಾ ಸೇತುವೆ ಸಮೀಪ ಭೂಕುಸಿತವಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾಯ ಹೆಚ್ಚಿದೆ. ನಗರದ ಪ್ರಮುಖ ರಸ್ತೆಗಳಲ್ಲಿರುವ ಮನೆಯಂಗಳಕ್ಕೆ ಅವಶೇಷಗಳು ಬಂದು ಬೀಳುತ್ತಿವೆ. ಇಲ್ಲಿನ ಆಸ್ಪತ್ರೆ ಬಳಿಯ ಚರಂಡಿಯಲ್ಲಿ ದೊಡ್ಡ ಬಂಡೆಗಳು ಉರುಳಿ ಬಂದಿವೆ. ಹಠಾತ್ ಪ್ರವಾಹದಿಂದ ಜನರು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅನೇಕ ವಾಹನಗಳು ಹೂತುಹೋಗಿದ್ದು, ಜನಜೀವನ ನಿರ್ವಹಣೆ ಸವಾಲಾಗಿದೆ. ಜೂನ್ 20ರಿಂದ ಸಂಭವಿಸಿರುವ ಭಾರಿ ಮಳೆ ಹಾಗು ಪ್ರವಾಹಕ್ಕೆ ಇಲ್ಲಿಯವರೆಗೆ 164 ಮಂದಿ ಸಾವನ್ನಪ್ಪಿದ್ದು, 269 ಮಂದಿ ಗಾಯಗೊಂಡಿದ್ದಾರೆ. 35 ಮಂದಿ ಕಣ್ಮರೆಯಾಗಿದ್ದಾರೆ. ಈ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ 74 ಮಂದಿ ಸಾವನ್ನಪ್ಪಿದ್ದು, 251 ಕಾಂಕ್ರಿಟ್ ಮತ್ತು 167 ಮಣ್ಣಿನ ಮನೆಗಳಿಗೆ ಹಾನಿಯಾಗಿದೆ. 437 ಕಾಂಕ್ರಿಟ್ ಮತ್ತು 467 ಮಣ್ಣಿನ ಮನೆಗಳು ಭಾಗಶಃ ಹಾನಿಗೊಂಡಿದ್ದು, 287 ಅಂಗಡಿಗಳು ಹಾನಿಗೊಂಡಿದೆ. 22,902 ಜಾನುವಾರುಗಳು ಮತ್ತು ಫೌಲ್ಟ್ರಿ ಪಕ್ಷಿಗಳು ಸಾವನ್ನಪ್ಪಿದ್ದು, ಒಟ್ಟಾರೆ 1,523 ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.