ನವದೆಹಲಿ: "ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಇಂದಿಗೆ 60 ವರ್ಷ. ಆದರೆ, ನಮ್ಮ ಪರಸ್ಪರ ಸಂಬಂಧಗಳ ಬೇರುಗಳು ಇತಿಹಾಸಕ್ಕಿಂತಲೂ ಹಳೆಯದು ಹಾಗೂ ಸಮುದ್ರದಷ್ಟು ಆಳ" ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ದ್ವೀಪದೇಶ ಮಾಲ್ಡೀವ್ಸ್ಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳನ್ನು ಶ್ಲಾಘಿಸಿದರು. "ಭಾರತ ಮಾಲ್ಡೀವ್ಸ್ನ ಅತ್ಯಂತ ಹತ್ತಿರದ ನೆರೆಯ ರಾಷ್ಟ್ರ. ನಾವು ನೆರೆಹೊರೆಯವರಾಗಿ ಮಾತ್ರವಲ್ಲ, ಸಹಪ್ರಯಾಣಿಕರಾಗಿ ಬೆಸೆದುಕೊಂಡಿದ್ದೇವೆ. ಭಾರತದ 'ನೆರೆಹೊರೆ ಮೊದಲು' ಎಂಬ ನೀತಿ ಮತ್ತು ಮಹಾಸಾಗರ್ ದೃಷ್ಟಿಕೋನ ಈ ಎರಡರಲ್ಲೂ ಉಭಯ ದೇಶಗಳು ಪ್ರಮುಖ ಸ್ಥಾನ ಹೊಂದಿವೆ. ಎರಡೂ ರಾಷ್ಟ್ರಗಳು ತಮ್ಮ ರಾಜತಾಂತ್ರಿಕ ಸಂಬಂಧಗಳ 60 ವರ್ಷಗಳನ್ನು ಆಚರಿಸುತ್ತಿವೆ. ಆದರೆ, ಈ ಸಂಬಂಧಗಳ ಬೇರುಗಳು ಇತಿಹಾಸಕ್ಕಿಂತ ಹಳೆಯ ಮತ್ತು ಸಾಗರಕ್ಕಿಂತಲೂ ಆಳ" ಎಂದು ಮೋದಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಬಣ್ಣಿಸಿದರು.
"ಮಾಲ್ಡೀವ್ಸ್ನ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಾಗಿರುವುದರಲ್ಲಿ ಭಾರತವು ಹೆಮ್ಮೆಪಡುತ್ತದೆ. ಅದು ನೈಸರ್ಗಿಕ ವಿಕೋಪಗಳಾಗಲಿ ಅಥವಾ ಸಾಂಕ್ರಾಮಿಕ ರೋಗಗಳಾಗಲಿ, ಭಾರತವು ಯಾವಾಗಲೂ 'ಮೊದಲ ಪ್ರತಿಕ್ರಿಯೆ ನೀಡುವವ'ನಾಗಿ ಮಾಲ್ಡೀವ್ಸ್ನ ಬೆಂಬಲಕ್ಕೆ ನಿಂತಿದೆ. ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದಾಗಲಿ ಅಥವಾ ಕೋವಿಡ್ ನಂತರದ ಆರ್ಥಿಕ ಚೇತರಿಕೆಗೆ ಬೆಂಬಲ ನೀಡುವುದಾಗಲಿ, ಭಾರತವು ಯಾವಾಗಲೂ ಮಾಲ್ಡೀವ್ಸ್ನೊಂದಿಗೆ ಕೈಜೋಡಿಸಿ ಕೆಲಸ ಮಾಡಿದೆ. ಇದಕ್ಕೆ ಇತಿಹಾಸದ ಬೇರುಗಳೇ ಸಾಕ್ಷಿ" ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕೂ ಮುನ್ನ ಭಾರತದ ಪ್ರಧಾನಿ ಮೋದಿ ಹಾಗೂ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ನಡುವೆ ದ್ವಿಪಕ್ಷಿಯ ಮಾತುಕತೆ ನಡೆದವು. ಈ ವೇಳೆ ಉಭಯ ನಾಯಕರು ವ್ಯಾಪಾರ, ರಕ್ಷಣೆ, ಮೂಲಸೌಕರ್ಯ ಸೇರಿದಂತೆ ಮೊದಲಾದ ವಿಚಾರಗಳ ಕುರಿತು ಪ್ರಸ್ತಾಪ ಮಾಡುವ ಮೂಲಕ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಭಾರತ ಸರ್ಕಾರ ಮಾಲ್ಡೀವ್ಸ್ಗೆ 4,850 ಕೋಟಿ ರೂ. ಮೌಲ್ಯದ ಸಾಲ ನೀಡುವುದನ್ನು ಘೋಷಿಸಿದ ಪ್ರಧಾನಿ ಮೋದಿ, ಶೀಘ್ರದಲ್ಲೇ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಒಪ್ಪಿಗೆ ಸೂಚಿಸಿದರು. ಇದರೊಂದಿಗೆ ಮಾಲ್ಡೀವ್ಸ್ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಶೇಕಡಾ 40 ರಷ್ಟು (USD 51 ಮಿಲಿಯನ್ನಿಂದ 29 ಮಿಲಿಯನ್ಗೆ) ಕಡಿಮೆ ಮಾಡುವ ಪರಿಷ್ಕೃತ ಒಪ್ಪಂದ, ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳ ಜಾರಿ, ಮುಕ್ತ ವ್ಯಾಪಾರದ ಕುರಿತ ಉಲ್ಲೇಖ ನಿಯಮಗಳ ಕುರಿತು ಒಪ್ಪಂದ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಸಹಕಾರ, ಭಾರತೀಯ ಹವಾಮಾನ ಇಲಾಖೆ ಮತ್ತು ಮಾಲ್ಡೀವ್ಸ್ ಹವಾಮಾನ ಸೇವೆ ನಡುವಿನ ಒಪ್ಪಂದ, ಡಿಜಿಟಲ್ ಪರಿವರ್ತನೆಗಾಗಿ ಪಾಲುದಾರತ್ವ ಒಪ್ಪಂದ, ಭಾರತೀಯ ಫಾರ್ಮಾಕೋಪಿಯಾ ಸಂಸ್ಥೆಗೆ ಮಾಲ್ಡೀವ್ಸ್ನ ಮಾನ್ಯತೆ, ಮಾಲ್ಡೀವ್ಸ್ನಲ್ಲಿ Unified Payments Interface (UPI) ಜಾರಿಗೆ ಒಪ್ಪಂದ ಹಾಗೂ ಭಾರತೀಯ ಔಷಧಶಾಸ್ತ್ರ ಮತ್ತು ದ್ವೀಪ ರಾಷ್ಟ್ರಕ್ಕೆ ಭಾರತದ ರಿಯಾಯಿತಿ ಸಾಲಕ್ಕಾಗಿ ಎರಡೂ ಕಡೆಯ ನಾಯಕರುಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, "ನಮಗೆ, ಯಾವಾಗಲೂ ಸ್ನೇಹವೇ ಮೊದಲು" ಎಂದು ತಿಳಿಸಿದರು.