ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಮೇಕ್ ಅಮೆರಿಕ ಗ್ರೇಟ್ ಅಗೇನ್' ಎಂಬ ಘೋಷಣೆಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳ ಮೇಲೆ ಸುಂಕ ಸಮರ ಸಾರಿದ್ದ ಟ್ರಂಪ್ ಇದೀಗ, ಭಾರತದ ಕಡೆ ತಮ್ಮ ವಕ್ರದೃಷ್ಟಿಯನ್ನು ಬೀರಿದ್ದಾರೆ. ಭಾರತ, ಚೀನಾದಂತಹ ದೇಶಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಡಿ. ಅಮೆರಿಕನ್ನರಿಗೆ ಮೊದಲ ಆದ್ಯತೆ ನೀಡಿ ಎಂದು ಗೂಗಲ್, ಮೈಕ್ರೋಸಾಫ್ಟ್ನಂತಹ ದೈತ್ಯ ಕಂಪನಿಗಳಿಗೆ ಕರೆ ನೀಡಿದ್ದಾರೆ. ಅಮೆರಿಕದ ಕಂಪನಿಗಳು ಭಾರತ, ಚೀನಾ ಸೇರಿ ಇತರ ದೇಶಗಳಲ್ಲಿ ಕಂಪನಿಗಳನ್ನು ಆರಂಭಿಸುವುದು, ಅಲ್ಲಿನ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಮೂಲಕ ತಾಯ್ನಾಡಿನ ಜನರಿಗೆ ಮೋಸ ಮಾಡುತ್ತಿದ್ದೀರಿ. ನಿಮ್ಮ ಆಯ್ಕೆ ಮತ್ತು ಆದ್ಯತೆ ಅಮೆರಿಕ ಮೊದಲಾಗಿರಬೇಕು ಎಂದು ತಾಕೀತು ಮಾಡಿದ್ದಾರೆ.
ವಾಷಿಂಗ್ಟನ್ನಲ್ಲಿ ನಡೆದ ಎಐ ಟೆಕ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಟ್ರಂಪ್, ಕಂಪನಿಗಳ ಜಾಗತಿಕವಾದವು ಅಮೆರಿಕನ್ನರನ್ನು ದುರ್ಬಲಗೊಳಿಸುತ್ತಿದೆ. ಇಲ್ಲಿನ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಾಕಷ್ಟು ಲಾಭ ಗಳಿಸಿದ್ದೀರಿ. ಆದರೆ, ಅದನ್ನು ಇಲ್ಲಿಯ ಜನರ ಮೇಲೆ ಹೂಡಿಕೆ ಮಾಡುವ ಬದಲು, ಹೊರ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಲಾಭಕ್ಕಾಗಿ ದೇಶವನ್ನು ಬಳಸಿಕೊಳ್ಳುತ್ತೀರಿ. ಚೀನಾದಲ್ಲಿ ನಿಮ್ಮ ಕಂಪನಿಯ ಘಟಕಗಳನ್ನು ಆರಂಭಿಸುತ್ತೀರಿ. ಭಾರತದಲ್ಲಿನ ಪ್ರತಿಭಾನ್ವಿತರನ್ನು ಉದ್ಯೋಗಿಗಳಾಗಿ ನೇಮಕ ಮಾಡಿಕೊಳ್ಳುತ್ತೀರಿ. ಬಂದ ಲಾಭದ ಹಣವನ್ನು ಐರ್ಲೆಂಡ್ನಲ್ಲಿ ಬಚ್ಚಿಡುತ್ತೀರಿ ಎಂದು ಛೇಡಿಸಿದ್ದಾರೆ.
ಅಮೆರಿಕ ಟೆಕ್ ಕಂಪನಿಗಳು ಏನೇ ಮಾಡಿದರೂ, ಅಮೆರಿಕಕ್ಕೆ ಸಂಪೂರ್ಣವಾಗಿ ಬದ್ಧರಾಗಿರಬೇಕು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜೊತೆಗೆ ದೇಶ ನಿಷ್ಠೆ ಹಾಗೂ ರಾಷ್ಟ್ರೀಯತೆಯೂ ಮಹತ್ವದ್ದಾಗಿದೆ. ನನ್ನ ಆಡಳಿತ ಮಂತ್ರ 'ಅಮೆರಿಕ ಮೊದಲು' ಎಂಬುದಾಗಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಮೆಟಾ, ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ನಂತಹ ದೈತ್ಯ ಕಂಪನಿಗಳಿಗೆ ನೀತಿ ಪಾಠ ಮಾಡಿದ್ದಾರೆ. ಭಾರತ - ಅಮೆರಿಕ ಶೀಘ್ರದಲ್ಲೇ ಕಡಿಮೆ ಸುಂಕಗಳೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಚೆಗೆ ಹೇಳಿದ್ದರು. ಇದು ಎರಡೂ ದೇಶಗಳಿಗೆ ಹಲವು ಪ್ರಯೋಜನಗಳನ್ನು ತರಲಿವೆ. ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಅದು ವಿಭಿನ್ನ ರೀತಿಯ ಒಪ್ಪಂದವಾಗಿರಲಿದೆ. ಇದು ನಮ್ಮಿಬ್ಬರ ಸ್ಪರ್ಧೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದರು.