ಗುಜರಾತ್ : ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಭಾರತದಲ್ಲಿ ಜಿಹಾದ್ ಪ್ರಚೋದಿಸುವುದು, ಭಾರತ ವಿರೋಧಿ ಪ್ರಚಾರ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸಲು ಈ ಉಗ್ರರು ಇನ್ಸ್ ಟಾಗ್ರಾಂ ಅನ್ನು ಬಳಸುತ್ತಿದ್ದ ಗಂಭೀರ ಆರೋಪವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೂನ್ 10ರಂದು ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ಹಲವು ಇನ್ಸ್ ಟಾಗ್ರಾಂ ಖಾತೆಗಳ ಬಗ್ಗೆ ಎಟಿಎಸ್ ಗೆ ಬಂದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಜುಲೈ 21 ಮತ್ತು 22ರಂದು ಅಹಮದಾಬಾದ್, ಮೋಡಸಾ, ದೆಹಲಿ ಮತ್ತು ನೋಯ್ಡಾದಿಂದ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಪ್ರಕಟಣೆ ತಿಳಿಸಿದೆ.
ಈ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹರ್ಷ ಉಪಾಧ್ಯಾಯ ಅವರು ಪ್ರತಿಕ್ರಿಯಿಸಿ, ಆರೋಪಿಗಳು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಪ್ರಚೋದನಕಾರಿ ವಿಷಯಗಳು ಮತ್ತು ಭಾರತ ಉಪಖಂಡದಲ್ಲಿ ಅಲ್ ಖೈದಾ ಸಿದ್ದಾಂತಗಳನ್ನು ಪ್ರಚಾರ ಮಾಡಲು ಬಳಸುತ್ತಿದ್ದರು. ಅದೇ ರೀತಿ, ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುತ್ತಿದ್ದರು ಎಂದು ಗುಪ್ತಚರ ಮಾಹಿತಿ ಬಹಿರಂಗಪಡಿಸಿದೆ ಎಂದು ಹೇಳಿದರು. ದೆಹಲಿಯ ಮೊಹಮ್ಮದ್ ಫೈಕ್, ಅಹಮದಾಬಾದ್‌ನ ಮೊಹಮ್ಮದ್ ಫರ್ದೀನ್ ಶೇಖ್, ಅರವಳ್ಳಿಯ ಮೋಡಸಾದ ಸೆಫುಲ್ಲಾ ಖುರೇಷಿ ಮತ್ತು ಉತ್ತರ ಪ್ರದೇಶದ ನೋಯ್ಡಾದ ಜೀಶನ್ ಅಲಿ.
ದೆಹಲಿಯ ಚಾಂದನಿ ಚೌಕ್ ಪ್ರದೇಶದಿಂದ ಬಂಧಿಸಲ್ಪಟ್ಟ ಮೊಹಮ್ಮದ್ ಫೈಕ್ ಎಂಬಾತನ ನಿವಾಸದಲ್ಲಿ ಶೋಧ ನಡೆಸಲಾಗಿದ್ದು, ದೆಹಲಿ ಪೊಲೀಸರು ಈತನ ಕುಟುಂಬ ಸದಸ್ಯರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ. ಉಗ್ರರು ಭಾರತದಲ್ಲಿ ಶರಿಯಾ ಆಧಾರಿತ ಕಲಿಫೇಟ್ ಸ್ಥಾಪಿಸುವ ಗುರಿ ಹೊಂದಿರುವ ಮೂಲಭೂತ ಸಿದ್ಧಾಂತವಾದ 'ಘಜ್ವಾ-ಎ-ಹಿಂದ್' ಅನ್ನು ಪ್ರಚಾರ ಮಾಡುವ ವಿಚಾರಗಳನ್ನು ಸಕ್ರಿಯವಾಗಿ ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ದಂಗೆಗೆ ಪ್ರೋತ್ಸಾಹಿಸುತ್ತಿದ್ದರು ಹಾಗು ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಶೋಧದ ವೇಳೆ ಓರ್ವನಿಂದ ಭಾರತ ಉಪಖಂಡದಲ್ಲಿ ಅಲ್ ಖೈದಾ ಪ್ರಚಾರ ಮಾಡುವ ಬರಹಗಳು, ಒಂದು ಕತ್ತಿ ಮತ್ತು ಜಿಹಾದ್ ಹಾಗು ಹಿಂಸಾಚಾರವನ್ನು ಉತ್ತೇಜಿಸುವ ವಿಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಟಿಎಸ್ ತಿಳಿಸಿದೆ. ಫರ್ದೀನ್ ಶೇಖ್ ಎಂಬಾತನ ಫೋನ್‌ನಿಂದ ವಶಪಡಿಸಿಕೊಂಡ ಒಂದು ವಿಡಿಯೊದಲ್ಲಿ ಆತ ಕತ್ತಿ ಬೀಸುತ್ತಾ "ಇದು ಮಾತ್ರ ಕಾಣೆಯಾಗಿದೆ, ಈಗ ಅದೂ ಪೂರ್ಣಗೊಂಡಿದೆ. ಅಲ್ಲಾಹು ಅಕ್ಬರ್" ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ನಾಲ್ವರ ಫೋನ್‌ಗಳಲ್ಲಿ ಇದೇ ರೀತಿಯ ಜಿಹಾದಿ ವಿಡಿಯೊಗಳು ಮತ್ತು ಸಶಸ್ತ್ರ ದಂಗೆಗೆ ಸಂಬಂಧಿಸಿದ ಫತ್ವಾಗಳು ಕಂಡುಬಂದಿವೆ ಎಂದು ಎಟಿಎಸ್ ತಿಳಿಸಿದೆ.
ಮೊಹಮ್ಮದ್ ಫೈಕ್ gujjar_sab.111 ಮತ್ತು M ಸಲಾವುದ್ದೀನ್ ಸಿದ್ದಿಕಿ 1360 ನಂತಹ ಪಾಕಿಸ್ತಾನಿ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳೊಂದಿಗೆ ಸಹಕರಿಸುತ್ತಿದ್ದ ಎಂದು ಎಟಿಎಸ್ ಹೇಳಿದೆ. ಎಸ್‌ಪಿ ಕೆ.ಸಿದ್ಧಾರ್ಥ್ ಅವರ ಮೇಲ್ವಿಚಾರಣೆಯಲ್ಲಿ ಗುಜರಾತ್ ಎಟಿಎಸ್‌ನ ಸಂಘಟಿತ ತಂಡಗಳು, ಕೇಂದ್ರೀಯ ತನಿಖಾ ಸಂಸ್ಥೆಗಳು, ದೆಹಲಿ ಪೊಲೀಸ್, ದೆಹಲಿ ವಿಶೇಷ ಕೋಶ ಮತ್ತು ಯುಪಿ ಎಟಿಎಸ್ ಜಂಟಿಯಾಗಿ ಈ ಉಗ್ರರನ್ನು ಬಂಧಿಸಿವೆ.