ನವದೆಹಲಿ: ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿ 150ಕ್ಕೂ ಅಧಿಕ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೋಟಿಸ್ ಸಲ್ಲಿಸಿದ್ದಾರೆ. ಮಳೆಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಆಡಳಿತ ಮತ್ತು ವಿರೋಧ ಪಕ್ಷಗಳ 145 ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ನೀಡಿದರು. ನ್ಯಾ.ವರ್ಮಾ ಅವರ ಪದಚ್ಯುತಿ ಪ್ರಕ್ರಿಯೆಯಲ್ಲಿ ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ತೆಲುಗು ದೇಶಂ ಪಕ್ಷ, ಜನತಾದಳ ಯುನೈಟೆಡ್, ಜನತಾದಳ ಸೆಕ್ಯುಲರ್, ಜನ ಸೇನಾ ಸೇರಿದಂತೆ ಹಲವು ಪಕ್ಷಗಳ ಸಂಸದರು ನೋಟಿಸ್ನಲ್ಲಿ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹಿ ಮಾಡಿದವರಲ್ಲಿ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್, ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ, ಬಿಜೆಪಿಯ ರವಿಶಂಕರ್ ಪ್ರಸಾದ್, ಕಾಂಗ್ರೆಸ್ನ ಕೆ.ಸಿ.ವೇಣುಗೋಪಾಲ್, ಕೆ.ಸುರೇಶ್, ಡಿಎಂಕೆ ನಾಯಕ ಟಿ.ಆರ್.ಬಾಲು, ಆರ್ಎಸ್ಪಿ ಸದಸ್ಯ ಎನ್.ಕೆ.ಪ್ರೇಮಚಂದ್ರನ್ ಹಾಗೂ ಐಯುಎಂಎಲ್ ಸಂಸದ ಇ.ಟಿ.ಮೊಹಮದ್ ಬಶೀರ್ ಸೇರಿದ್ದಾರೆ. ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರಿಗೂ ಸಂಸದರು ನೋಟಿಸ್ ನೀಡಿದ್ದಾರೆ. ಮೇಲ್ಮನೆಯ 63 ಸದಸ್ಯರು ನೋಟಿಸ್ಗೆ ಸಹಿ ಹಾಕಿದ್ದಾರೆ.
ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ಪದಚ್ಯುತಗೊಳಿಸಲು ಕೋರಿ ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ಸಂಸತ್ತು ಪ್ರಕ್ರಿಯೆ ಆರಂಭಿಸಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಹಣದ ಕಂತೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಪ್ರಕರಣ ಬಯಲಾದ ಬಳಿಕ ಈ ಬಗ್ಗೆ ತನಿಖೆಗೆ ಸೂಚಿಸಲಾಗಿತ್ತು. ಸುಪ್ರೀಂ ಕೋರ್ಟ್ನ ಆಂತರಿಕ ತನಿಖೆಯಲ್ಲಿ ವರ್ಮಾ ಅವರ ವಿರುದ್ಧ ಆರೋಪ ಸಾಬೀತಾಗಿತ್ತು. ಬಳಿಕ ನ್ಯಾ.ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗ ಮಾಡಲಾಗಿತ್ತು. ಆರೋಪ ಸಾಬೀತಾದ ಬಳಿಕ ಪದಚ್ಯುತಗೊಳಿಸುವ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ನ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಶಿಫಾರಸು ಮಾಡಿದ್ದರು.