image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮ್ಯಾನ್ಮಾರ್ ನ ತಮ್ಮ ಶಿಬಿರದ ಮೇಲೆ ಡ್ರೋನ್ ದಾಳಿ ವಿಡಿಯೋ ಫೋಟೋ ಬಿಡುಗಡೆ ಮಾಡಿದ ಬಂಡುಕೋರರು

ಮ್ಯಾನ್ಮಾರ್ ನ ತಮ್ಮ ಶಿಬಿರದ ಮೇಲೆ ಡ್ರೋನ್ ದಾಳಿ ವಿಡಿಯೋ ಫೋಟೋ ಬಿಡುಗಡೆ ಮಾಡಿದ ಬಂಡುಕೋರರು

ಅಸ್ಸಾಂ : ಮ್ಯಾನ್ಮಾರ್‌ನಲ್ಲಿರುವ ತನ್ನ ಶಿಬಿರದ ಮೇಲೆ ನಡೆದ ತೀವ್ರ ಡ್ರೋನ್ ದಾಳಿಯ ವಿನಾಶಕಾರಿ ಪರಿಣಾಮವನ್ನು ಪ್ರದರ್ಶಿಸುವ ಫೋಟೋಗಳು ಮತ್ತು ವಿಡಿಯೋಗಳನ್ನು ಉಲ್ಫಾ (ಸ್ವತಂತ್ರ) ಬಂಡಾಯ ಗುಂಪು ಇಂದು ಬಿಡುಗಡೆ ಮಾಡಿದೆ. ಅದರಲ್ಲಿ ಮೂವರು ಮೃತ ನಾಯಕರ ಚಿತ್ರಗಳಿವೆ. ಜುಲೈ 13 ರ ಬೆಳಗ್ಗೆ ಮ್ಯಾನ್ಮಾರ್‌ನಲ್ಲಿ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪು ಉಲ್ಫಾ (ಸ್ವತಂತ್ರ) ಶಿಬಿರದ ಮೇಲೆ ಭೀಕರ ಡ್ರೋನ್ ದಾಳಿ ನಡೆಸಲಾಗಿತ್ತು. ಅದಾಗ್ಯೂ, ದಾಳಿಯು ನಿಗೂಢವಾಗಿ ಉಳಿದಿದೆ. ಏಕೆಂದರೆ ಇದುವರೆಗೆ ಯಾರೊಬ್ಬರೂ ಅಧಿಕೃತವಾಗಿ ಇದರ ಹೊಣೆ ಹೊತ್ತುಕೊಂಡಿಲ್ಲ. ಉಲ್ಫಾ (ಸ್ವತಂತ್ರ) ಶಿಬಿರದ ಮೇಲಿನ ನಿಗೂಢ ಡ್ರೋನ್ ದಾಳಿಯು ಹಲವಾರು ಶಿಬಿರಗಳನ್ನು ನಾಶಪಡಿಸಿತು ಮತ್ತು ಗಮನಾರ್ಹ ಜೀವ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಯಿತು. ಇದು ಚೀನಾದ ಯುನ್ನಾನ್‌ನಲ್ಲಿ ಆಶ್ರಯ ಪಡೆದ ಪರೇಶ್ ಬರುವಾ ನೇತೃತ್ವದ ಉಲ್ಫಾ (ಸ್ವತಂತ್ರ) ಸಂಘಟನೆಗೆ ತೀವ್ರ ಹೊಡೆತ ನೀಡಿದೆ. ಅವರ ಮೂವರು ಉನ್ನತ ನಾಯಕರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.

ಉಲ್ಫಾ ಬಿಡುಗಡೆಗೊಳಿಸಿರುವ ಫೋಟೋ ಹಾಗೂ ವಿಡಿಯೋಗಳಲ್ಲಿ ದಾಳಿಯ ತೀವ್ರತೆ ಸ್ಪಷ್ಟವಾಗಿ ಕಾಣುತ್ತದೆ. ಹಲವಾರು ಶಿಬಿರಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಮತ್ತು ವಿವಿಧ ವಸ್ತುಗಳು ಸುತ್ತಲೂ ಹರಡಿಕೊಂಡಿವೆ. ಈ ಫೋಟೋಗಳು ಮತ್ತು ವಿಡಿಯೋಗಳಿಂದ ಉಲ್ಫಾ (ಸ್ವತಂತ್ರ) ವ್ಯಾಪಕ ಹಾನಿ ಅನುಭವಿಸಿದೆ ಎಂಬುದು ಸ್ಪಷ್ಟವಾಗಿದೆ. ದೃಶ್ಯಗಳು ಈ ಹಠಾತ್ ದಾಳಿಯ ವಿನಾಶಕಾರಿ ಸ್ವರೂಪವನ್ನು ಎತ್ತಿ ತೋರಿಸಿವೆ. ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಸ್ವತಂತ್ರ) ಮತ್ತು RPF/PLA ಸಂಘಟನೆಗಳಿಗೆ ಸೇರಿದ ಹಲವಾರು ಶಿಬಿರಗಳನ್ನು ಗುರಿಯಾಗಿಸಿಕೊಂಡು, ಜುಲೈ 13 ರಂದು ಬೆಳಗಿನ ಜಾವ ಸುಮಾರು 2 ಗಂಟೆಯಿಂದ 4 ಗಂಟೆಯ ನಡುವೆ ದಾಳಿಗಳನ್ನು ನಡೆಸಲಾಗಿದೆ. ಇಸ್ರೇಲ್ ಮತ್ತು ಫ್ರಾನ್ಸ್‌ನಲ್ಲಿ ತಯಾರಿಸಿದ ಡ್ರೋನ್‌ಗಳನ್ನು ಬಳಸಿ ಈ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗಿದೆ ಎಂದು ಉಲ್ಫಾ (ಸ್ವತಂತ್ರ) ಹೇಳಿಕೊಂಡಿದೆ.

ಈ ನಿಗೂಢ ಡ್ರೋನ್ ದಾಳಿಯಲ್ಲಿ ಮೂವರು ಉಲ್ಫಾ (ಸ್ವತಂತ್ರ) ನಾಯಕರು ಮೃತಪಟ್ಟಿದ್ದಾರೆ. ಅವರಲ್ಲಿ ಉಲ್ಫಾ (ಸ್ವತಂತ್ರ)ದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ನಯನ್ ಅಸೋಮ್ ಕೂಡ ಸೇರಿದ್ದಾರೆ. ಅಲ್ಲದೇ, ಉಲ್ಫಾ (ಐ) ತನ್ನ 19 ಸದಸ್ಯರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಈ ನಿಗೂಢ ಡ್ರೋನ್ ದಾಳಿಯ ಬಗ್ಗೆ ಭಾರತೀಯ ಸೇನೆಯಾಗಲಿ ಅಥವಾ ಯಾವುದೇ ಅಂತಾರಾಷ್ಟ್ರೀಯ ಪಕ್ಷವಾಗಲಿ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಅದಾಗ್ಯೂ, ಘಟನೆಯ ನಂತರ ಉಲ್ಫಾ (ಸ್ವತಂತ್ರ)ದ ಕಮಾಂಡರ್-ಇನ್-ಚೀಫ್ ಪರೇಶ್ ಬರುವಾ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಭಾರತೀಯ ಸೇನೆಯೇ ದಾಳಿ ನಡೆಸಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಈ ದಾಳಿಯ ಬಗ್ಗೆ ಭಾರತ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಈ ದಾಳಿ ಅಸ್ಸಾಮ್​​ನಿಂದ ನಡೆಸಲಾಗಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

ಇದೀಗ ಮ್ಯಾನ್ಮಾರ್‌ನಲ್ಲಿ ಈ ಸರ್ಜಿಕಲ್ ದಾಳಿಯನ್ನು ಯಾರು ನಡೆಸಿದರು? ಎಂಬ ಬಗ್ಗೆ ಪದೇ ಪದೇ ಪ್ರಶ್ನೆಗಳು ಉದ್ಭವಿಸುತ್ತವೆ. ಮ್ಯಾನ್ಮಾರ್‌ನಲ್ಲಿ ಉಲ್ಫಾ (ಸ್ವತಂತ್ರ) ಶಿಬಿರದ ಮೇಲಿನ ದಾಳಿಯ ಘಟನೆಯು ಗೊಂದಲದಲ್ಲಿ ಮುಚ್ಚಿಹೋಗಿದ್ದರೂ, ಈ ಘಟನೆಯು ಉಲ್ಫಾ (ಸ್ವತಂತ್ರ) ಕ್ಕೆ ಗಮನಾರ್ಹವಾಗಿ ಹಾನಿ ಮಾಡಿದೆ ಎಂಬುದಂತೂ ಖಚಿತವಾಗಿದೆ.

Category
ಕರಾವಳಿ ತರಂಗಿಣಿ