ಉತ್ತರ ಕನ್ನಡ : ಗೋಕರ್ಣದ ರಾಮತೀರ್ಥ ಬಳಿಯ ಗುಹೆಯೊಂದರಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯನ್ ಮಹಿಳೆಯನ್ನು ರಕ್ಷಿಸಿದ್ದ ಪೊಲೀಸರು, ಇದೀಗ ಅವರನ್ನು ತಾಯ್ನಾಡಿಗೆ ಗಡಿಪಾರು ಮಾಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದರಿಂದ ಪ್ರಕೃತಿಯ ಮಡಿಲಲ್ಲಿ ಆಧ್ಯಾತ್ಮಿಕ ಜೀವನ ನಡೆಸಲು ಬಯಸಿದ್ದ ಮಹಿಳೆ ನಿರಾಸೆಯೊಂದಿಗೆ ತಾಯ್ನಾಡಿಗೆ ಮರಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜುಲೈ 9ರಂದು ಗೋಕರ್ಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಧರ್ ಎಸ್.ಆರ್. ನೇತೃತ್ವದ ತಂಡವು ರಾಮತೀರ್ಥ ಬೆಟ್ಟದಲ್ಲಿ ಗಸ್ತು ತಿರುಗುತ್ತಿದ್ದಾಗ ಅನಿರೀಕ್ಷಿತವಾಗಿ ಗುಹೆಯ ನಿವಾಸಿಗಳನ್ನು ಪತ್ತೆ ಮಾಡಿದೆ. ಪರಿಶೀಲಿಸಿದಾಗ, ನಿನಾ ಕುಟಿನಾ ಎಂಬ ಮಹಿಳೆ ಹಾಗು ಆಕೆಯ ಮಕ್ಕಳಾದ ಆರು ವರ್ಷದ ಪ್ರಿಮಾ ಮತ್ತು ನಾಲ್ಕು ವರ್ಷದ ಅಮಾ ಜೊತೆಗೆ ಅಲ್ಲಿ ವಾಸಿಸುತ್ತಿರುವುದು ತಿಳಿದುಬಂದಿತ್ತು. ಪ್ರಕೃತಿಯ ಮಡಿಲಲ್ಲಿ ಬದುಕಲು ಮತ್ತು ದೇವರನ್ನು ಪೂಜಿಸಲು ನನಗೆ ಆಸಕ್ತಿ ಇದೆ. ಗೋವಾದಿಂದ ಬಂದು ಇಲ್ಲಿ ನೆಲೆಸಿರುವುದಾಗಿ ಅವುರು ತಿಳಿಸಿದ್ದರು.
ಪೊಲೀಸರ ಪ್ರಕಾರ, ನಿನಾ ಮತ್ತು ಅವರ ಮಕ್ಕಳು ವಾಸಿಸುತ್ತಿದ್ದ ರಾಮತೀರ್ಥ ಬೆಟ್ಟವು ಹಿಂದೆ ಭೂಕುಸಿತಕ್ಕೊಳಗಾದ ಅಪಾಯಕಾರಿ ಪ್ರದೇಶವಾಗಿದ್ದು, ವಿಷಕಾರಿ ಹಾವುಗಳ ಹಾವಳಿಯೂ ಇಲ್ಲಿದೆ. ಇಂತಹ ಅಸುರಕ್ಷಿತ ಪರಿಸರದಿಂದ ಮಕ್ಕಳೊಂದಿಗೆ ತಕ್ಷಣ ಹೊರಬರುವಂತೆ ಪೊಲೀಸರು ನಿನಾ ಅವರಿಗೆ ಮನವರಿಕೆ ಮಾಡಿದ್ದಾರೆ. ಅವರ ಇಚ್ಛೆಯಂತೆ, ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಅವರನ್ನು ಕುಮಟಾ ತಾಲೂಕಿನ ಬಂಕಿ ಕೊಡ್ಲುವಿನಲ್ಲಿರುವ ಶಂಕರ ಪ್ರಸಾದ್ ಫೌಂಡೇಶನ್ ಎನ್‌ಜಿಒಗೆ ಸಂಬಂಧಿಸಿದ ಯೋಗ ರತ್ನ ಸರಸ್ವತಿ ಸ್ವಾಮೀಜಿ ಅವರ ಆಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು. ವಿದೇಶಿ ನಿಯಮಗಳ ಉಲ್ಲಂಘನೆ ಮತ್ತು ಗಡಿಪಾರು ಪ್ರಕ್ರಿಯೆ: ಆಧ್ಯಾತ್ಮಿಕತೆಯ ಬಗ್ಗೆ ಆಳವಾದ ಒಲವಿದ್ದರೂ, ನಿನಾ ಕುಟಿನಾ ತಮ್ಮ ಮತ್ತು ಮಕ್ಕಳ ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳನ್ನು ನೀಡಲು ಹಿಂಜರಿದಿದ್ದರು. ಅವರು ವಾಸಿಸುತ್ತಿದ್ದ ಗುಹೆಯ ಬಳಿ ಪತ್ತೆಯಾದ ದಾಖಲೆಗಳ ಪ್ರಕಾರ, ಅವರ ವೀಸಾ ಅವಧಿ 2017ರ ಏಪ್ರಿಲ್ 17ರಂದೇ ಮುಗಿದಿರುವುದು ದೃಢಪಟ್ಟಿದೆ. 2016ರ ಅಕ್ಟೋಬರ್ 18 ರಿಂದ 2017ರ ಏಪ್ರಿಲ್ 17 ರವರೆಗೆ ವ್ಯಾಪಾರ ವೀಸಾದಲ್ಲಿ ಈ ಮಹಿಳೆ ಗೋವಾಕ್ಕೆ ಆಗಮಿಸಿದ್ದರು. ಅವಧಿ ಮೀರಿದ ವಾಸ್ತವ್ಯದ ನಂತರ, 2018ರಲ್ಲಿ ನೇಪಾಳಕ್ಕೆ ಹೋಗಿ ಅಲ್ಲಿಂದ ಮತ್ತೆ ಭಾರತಕ್ಕೆ ಮರಳಿರುವುದು ಗೊತ್ತಾಗಿದೆ.
ಈ ಸನ್ನಿವೇಶಗಳನ್ನು ಪರಿಗಣಿಸಿ, ನಿನಾ ಮತ್ತು ಅವರ ಮಕ್ಕಳನ್ನು ಪ್ರಸ್ತುತ ಕಾರವಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಬೆಂಗಳೂರಿನ FRRO (Foreigners Regional Registration Office) ನೊಂದಿಗೆ ಸಂಪರ್ಕ ಸಾಧಿಸಲಾಗಿದ್ದು, ಅವರನ್ನು ರಷ್ಯಾಕ್ಕೆ ಗಡಿಪಾರು ಮಾಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಜುಲೈ 14ರಂದು, ನಿನಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳನ್ನು ಗಡಿಪಾರು ಆದೇಶಕ್ಕಾಗಿ ಬೆಂಗಳೂರಿನ ಎಫ್‌ಆರ್‌ಆರ್‌ಒ ಮುಂದೆ ಹಾಜರುಪಡಿಸಲಾಗಿತ್ತು. ತಮ್ಮ ಅಸಾಮಾನ್ಯ ಜೀವನಶೈಲಿಯ ಬಗ್ಗೆ ಆನ್‌ಲೈನ್ ವೇದಿಕೆಯ ಮೂಲಕ ನಿನಾ ಕುಟಿನಾ ಅವರು ಸ್ನೇಹಿತರಿಗೆ ಕಳುಹಿಸಿದ್ದ ಸಂದೇಶವೊಂದು ಪೊಲೀಸರಿಗೆ ದೊರೆತಿದೆ. ಈ ಸಂದೇಶದಲ್ಲಿ ನಿನಾ, "ಗುಹೆಯಲ್ಲಿ ನಮ್ಮ ಶಾಂತಿಯುತ ಜೀವನ ಕೊನೆಗೊಂಡಿದೆ. ನಮ್ಮ ಗುಹೆ ಮನೆಯನ್ನು ನಾಶಪಡಿಸಲಾಗಿದೆ ಮತ್ತು ನಾವು ಈಗ ಆಕಾಶ, ಹುಲ್ಲು ಅಥವಾ ಜಲಪಾತವಿಲ್ಲದ, ತಣ್ಣನೆಯ, ಗಟ್ಟಿಯಾದ ನೆಲದ ಮೇಲೆ ಮಲಗಿರುವ ಸ್ಥಳದಲ್ಲಿದ್ದೇವೆ. ನಮ್ಮನ್ನು ಮಳೆ ಮತ್ತು ಹಾವುಗಳಿಂದ ರಕ್ಷಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ತೆರೆದ ಆಕಾಶದ ಅಡಿಯಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ವಾಸಿಸುತ್ತಿರುವ ನಮಗೆ, ಯಾವುದೇ ಹಾವು ಅಥವಾ ಪ್ರಾಣಿ ಹಾನಿ ಮಾಡಿಲ್ಲ" ಎಂದು ತಿಳಿಸಿದ್ದಾರೆ.