ನವದೆಹಲಿ: ಪ್ರಾಧ್ಯಾಪಕರ ಲೈಂಗಿಕ ಕಿರುಕುಳದಿಂದ ನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಒಡಿಶಾದ ಕಾಲೇಜೊಂದರ ವಿದ್ಯಾರ್ಥಿನಿಯ ಪ್ರಕರಣದ ಬಗ್ಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. "ದೇಶದ ಮಗಳೊಬ್ಬರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಆದರೆ, ಪ್ರಧಾನಿ ಮೌನವಾಗಿದ್ದಾರೆ. ಜನರಿಗೆ ಬೇಕಿರುವುದು ಉತ್ತರವೇ ಹೊರತು ಪ್ರಧಾನಿಯ ಮೌಲವಲ್ಲ" ಎಂದು ಹೇಳಿದ್ದಾರೆ. ಒಡಿಶಾದ ಬಾಲಸೋರ್ನಲ್ಲಿ ಫಕೀರ ಮೋಹನ್ (ಸ್ವಾಯುತ್ತ) ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಲೈಂಗಿಕ ಕಿರುಕುಳ ಹಾಗೂ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮಕ್ಕೆ ಮುಂದಾಗದಿರುವ ಹಿನ್ನೆಲೆಯಲ್ಲಿ ಪ್ರಾಂಶುಪಾಲರ ಕೊಠಡಿಯೆದುರೇ ಬೆಂಕಿ ಹಂಚಿಕೊಂಡಿದ್ದರು. ತೀವ್ರ ಸ್ವರೂಪದ ಸುಟ್ಟ ಗಾಯಗಳಿಂದಾಗಿ ಸೋಮವಾರ ಭುವನೇಶ್ವರದ ಏಮ್ಸ್ ಆಸ್ಪತ್ರೆಯಯಲ್ಲಿ ಮೃತಪಟ್ಟಿದ್ದರು.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, "ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡಿದ ವಿದ್ಯಾರ್ಥಿನಿಯ ಸಾವು ಬಿಜೆಪಿ ಆಡಳಿತದ ಕೊಲೆ. ಲೈಂಗಿಕ ಕಿರುಕುಳದ ವಿರುದ್ಧ ಆ ಧೈರ್ಯವಂತ ವಿದ್ಯಾರ್ಥಿನಿ ಧ್ವನಿ ಎತ್ತಿದ್ದರು. ಆದರೆ, ಆಕೆಗೆ ನ್ಯಾಯ ಕೊಡಿಸುವ ಬದಲಾಗಿ ಬೆದರಿಸಿ, ದೌರ್ಜನ್ಯ ಎಸಗಿ, ಪದೇ ಪದೇ ಅವಮಾನ ಮಾಡಲಾಗಿದೆ. ಆಕೆಯನ್ನು ರಕ್ಷಣೆ ಮಾಡಬೇಕಾದವರೇ ಧ್ವನಿ ಅಡಗಿಸಿದ್ದಾರೆ" ಎಂದು ಟೀಕಿಸಿದ್ದಾರೆ. "ಬಿಜೆಪಿ ಎಂದಿನಂತೆ ಆರೋಪಿಯನ್ನು ರಕ್ಷಣೆ ಮಾಡಿ, ಅಮಾಯಕ ಮಗಳನ್ನು ಬೆಂಕಿ ಹಚ್ಚಿಕೊಳ್ಳುವಂತೆ ಮಾಡಿದೆ. ಇದು ಆತ್ಮಹತ್ಯೆಯಲ್ಲ. ಸಂಘಟಿತ ಕೊಲೆ" ಎಂದು ರಾಹುಲ್ ಆರೋಪಿಸಿದ್ದಾರೆ. "ಮೋದಿ ಜಿ, ನೀವು ಮೌನವಾಗಿದ್ದೀರಿ. ದೇಶಕ್ಕೆ ಬೇಕಿರುವುದು ನಿಮ್ಮ ಮೌನವಲ್ಲ. ನಿಮ್ಮ ಉತ್ತರ. ಭಾರತದ ಮಗಳಿಗೆ ಬೇಕಿರುವುದು ಭದ್ರತೆ ಮತ್ತು ನ್ಯಾಯ" ಎಂದು ಅವರು ತಿಳಿಸಿದ್ದಾರೆ.