ನವದೆಹಲಿ: "ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಸೃಷ್ಟಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸಿದೆ. ಕಳೆದ 11 ವರ್ಷಗಳಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ. ಶನಿವಾರ ಅವರು 51 ಸಾವಿರಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವರ್ಚುಯಲ್ ಆಗಿ ವಿತರಣೆ ಮಾಡಿದ ನಂತರ ಮಾತನಾಡಿ, "ತಮ್ಮ ನೇತೃತ್ವದ ಸರ್ಕಾರವು ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, 10 ಕೋಟಿಗೂ ಹೆಚ್ಚು ಹೊಸ LPG ಸಂಪರ್ಕ, ಮೇಲ್ಛಾವಣಿ ಸೌರಶಕ್ತಿ ಕಾರ್ಯಕ್ರಮ, ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ" ಎಂದು ಹೇಳಿದರು.
"ಕಳೆದ 10 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲಕ್ಕೆತ್ತಲಾಗಿದೆ. ಇದು ಅವರಿಗೆ ಉದ್ಯೋಗ ಮತ್ತು ಆದಾಯದ ಮೂಲವನ್ನೂ ಹೆಚ್ಚಿಸಿದೆ. ಉತ್ಪಾದನೆಯನ್ನು ಹೆಚ್ಚಿಸುವತ್ತ ತಮ್ಮ ಸರ್ಕಾರ ಗಮನ ಹರಿಸಿರುವುದು ಫಲ ನೀಡಿದೆ. 11 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಐದು ಪಟ್ಟು ಹೆಚ್ಚಾಗಿದೆ. ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ ಎರಡರಿಂದ 300 ಕ್ಕೆ ಏರಿದೆ" ಎಂದು ತಿಳಿಸಿದರು. "ಆಪರೇಷನ್ ಸಿಂಧೂರ್ ನಂತರ ರಕ್ಷಣಾ ಉತ್ಪಾದನೆಯನ್ನು ಬಹುವಾಗಿ ಹೆಚ್ಚಿಸಲಾಗಿದೆ. ಅದರ ಉತ್ಪಾದನಾ ಮೌಲ್ಯವು 1.25 ಲಕ್ಷ ಕೋಟಿ ರೂ.ಗಳಿಗೆ ಮೀರಿದೆ" ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 16 ನೇ ಆವೃತ್ತಿಯ ರೋಜ್‌ಗಾರ್ ಮೇಳದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಕರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿದರು. ನೇಮಕಾತಿದಾರರು ರೈಲ್ವೆ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಅಂಚೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಇತರ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಉದ್ಯೋಗಕ್ಕೆ ಸೇರಲಿದ್ದಾರೆ. ಏಪ್ರಿಲ್‌ನಲ್ಲಿ ನಡೆದ 15 ನೇ ರೋಜ್‌ಗಾರ್ ಮೇಳದಲ್ಲಿ 6,677 ನೇಮಕಾತಿ ಪತ್ರಗಳನ್ನು ನೀಡಲಾಗಿತ್ತು.