image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮೋಸ್ಟ್​​​ ವಾಂಟೆಂಡ್​ ಕುಬ್ಬಾವಾಲಾ ಮುಸ್ತಫಾ ಯುಎಇಯಿಂದ ಭಾರತಕ್ಕೆ ಹಸ್ತಾಂತರ

ಮೋಸ್ಟ್​​​ ವಾಂಟೆಂಡ್​ ಕುಬ್ಬಾವಾಲಾ ಮುಸ್ತಫಾ ಯುಎಇಯಿಂದ ಭಾರತಕ್ಕೆ ಹಸ್ತಾಂತರ

ನವದೆಹಲಿ: ಮಾದಕವಸ್ತು ತಯಾರಿಕಾ ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿದ್ದ ಆರೋಪಿ ಹಾಗೂ ಇಂಟರ್​ಪೋಲ್​ ರೆಡ್​ ನೋಟಿಸ್​ ಹೊಂದಿದ್ದ ಕುಬ್ಬಾವಾಲಾ ಮುಸ್ತಫಾನನ್ನು ಸಿಬಿಐ ಯುಎಇಯಿಂದ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಇಂಟರ್‌ಪೋಲ್ ರೆಡ್​ ನೋಟಿಸ್​ ಎದುರಿಸುತ್ತಿರುವ ಮುಸ್ತಾಫಾ ಸಿಂಥೆಟಿಕ್ ಮಾದಕವಸ್ತು ತಯಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂಡ ಕರೆ ತಂದಿದೆ.

ಸಿಬಿಐನ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಘಟಕ (ಐಪಿಸಿಯು) ಎನ್‌ಸಿಬಿಯು ಅಬುಧಾಬಿ ಸಹಯೋಗದೊಂದಿಗೆ ಯಶಸ್ವಿಯಾಗಿ ಹಸ್ತಾಂತರ ಪ್ರಕ್ರಿಯೆ ನಡೆಸಿದ್ದು, ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಡ್ರಗ್ಸ್​ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ಬೇಕಾದ ಅಪರಾಧಿ ಈತ. ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಕಾ ಘಟಕವನ್ನು ಮುಂಬೈ ಪೊಲೀಸರು ಭೇದಿಸಿದ್ದರು. ಈ ವೇಳೆ, 126.141 ಕೆಜಿ ಮೆಫೆಡ್ರೋನ್ ಡ್ರಗ್ಸ್​ ವಶಕ್ಕೆ ಪಡೆದಿದ್ದರು. ಈ ತಯಾರಿಕಾ ಘಟಕವನ್ನು ವಿದೇಶದಿಂದಲೇ ಮುಸ್ತಫಾ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು.

ಮುಸ್ತಫಾ ವಿರುದ್ಧ ಮುಂಬೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ವಿಶೇಷ ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ನಾರ್ಕೊಟಿಕ್​ ಪ್ರಕರಣದಲ್ಲಿ ಬೇಕಾಗಿದ್ದ ಈ ಆರೋಪಿ ಪತ್ತೆಗೆ ಮುಂಬೈ ಪೊಲೀಸರ ಮನವಿ ಮೇರೆಗೆ ಇಂಟರ್​ಪೋಲ್​ ರೆಡ್​​ ನೋಟಿಸ್​ ಹೊರಡಿಸಿತ್ತು. ಸಿಬಿಐ ಎನ್​ಸಿಬಿ ಮೂಲಕ ಈತ ಅಬುಧಾಬಿಯಲ್ಲಿ ಇರುವುದನ್ನು ಪತ್ತೆ ಮಾಡಿತ್ತು. ವಾಂಟೆಡ್ ರೆಡ್ ನೋಟಿಸ್ ಹಿನ್ನೆಲೆಯಲ್ಲಿ ಕುಬ್ಬಾವಾಲಾ ಮುಸ್ತಫಾನನ್ನು ಭಾರತಕ್ಕೆ ಯಶಸ್ವಿಯಾಗಿ ಮರಳಿ ತರಲಾಗಿದೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಈ ವಿಚಾರವಾಗಿ ಮೊದಲು ಸಿಬಿಐ ಇಂಟರ್‌ಪೋಲ್ ಮೂಲಕ ಎನ್‌ಸಿಬಿ ಅಬುಧಾಬಿಯೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಯುಎಇಯಲ್ಲಿ ಈತನ ಇರುವಿಕೆಯನ್ನು ಭೌಗೋಳಿಕವಾಗಿ ಪತ್ತೆ ಮಾಡಿತ್ತು.

ಮುಂಬೈ ಪೊಲೀಸರ ಮನವಿ ಮೇರೆಗೆ 2024ರ ನವೆಂಬರ್ 25ರಂದು ಇಂಟರ್‌ಪೋಲ್ ಮೂಲಕ ಸಿಬಿಐ ರೆಡ್ ನೋಟಿಸ್ ಪ್ರಕಟಿಸಿತ್ತು. ಎನ್‌ಸಿಬಿ-ಅಬುಧಾಬಿ 2025 ಜೂನ್ 19ರಂದು ಭಾರತಕ್ಕೆ ಯಶಸ್ವಿಯಾಗಿ ಕರೆತರಲು ತನ್ನ ಭದ್ರತಾ ಪಡೆಯನ್ನು ಕಳುಹಿಸಲು ವಿನಂತಿಸಿತ್ತು. ಇದಾದ ಬಳಿಕ ಆತನನ್ನು ಯುಎಇಯಿಂದ ಕರೆ ತರಲು ಮುಂಬೈ ಪೊಲೀಸರ ತಂಡವನ್ನು ರಚಿಸಿ ಕಳುಹಿಸಲಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. ಈ ಮುಂಬೈ ಪೊಲೀಸರ ತಂಡ ಜುಲೈ 7ರಂದು ಯುಎಇಗೆ ತೆರಳಿತ್ತು.

Category
ಕರಾವಳಿ ತರಂಗಿಣಿ