image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್ ಕೆಫೆ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ

ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್ ಕೆಫೆ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ

ಕೆನಡಾ : ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್ ಕೆಫೆ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ ನಡೆದಿದೆ. ಕೆಫೆ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ. ಅದೃಷ್ಟವಶಾತ್, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಕಟ್ಟಡದ ಮೇಲೆ ಕನಿಷ್ಠ ಒಂಬತ್ತು ಗುಂಡು ಹಾರಿಸಲಾಗಿದೆ. ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾರಿನೊಳಗೆ ಕುಳಿತಿದ್ದ ವ್ಯಕ್ತಿಯೊಬ್ಬ ಕೆಫೆಯ ಗಾಜಿನ ಕಿಟಕಿಗಳ ಮೇಲೆ ನಿರಂತರ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪಕ್ಕದ ವಸತಿ ಕಟ್ಟಡಗಳ ಮೇಲೂ ಗುಂಡುಗಳ ಗುರುತುಗಳು ಕಂಡುಬಂದಿವೆ. ದಾಳಿಕೋರರು ಕಾರಿನಲ್ಲಿ ಬಂದು ಕೃತ್ಯ ಎಸಗಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದಾಳಿಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾರೆ. ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಟ್ಟಿ ಮಾಡಿರುವ ವಾಂಟೆಡ್ ವ್ಯಕ್ತಿ ಲಡ್ಡಿ, ನಿಷೇಧಿತ ಉಗ್ರಗಾಮಿ ಗುಂಪು ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್​​ (ಬಿಕೆಐ) ಜೊತೆ ಸಂಪರ್ಕ ಹೊಂದಿದ್ದಾನೆ. ಕಪಿಲ್ ಶರ್ಮಾ ಈ ಹಿಂದೆ ನೀಡಿದ ಹೇಳಿಕೆಗೆ ಪ್ರತಿಯಾಗಿ ಲಡ್ಡಿ ಈ ದಾಳಿ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಗಳಾಗಿವೆ. 2023ರ ಏಪ್ರಿಲ್​ನಲ್ಲಿ ಪಂಜಾಬ್‌ನ ರೂಪನಗರ ಜಿಲ್ಲೆಯಲ್ಲಿ ಕೊಲೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ವಿಕಾಸ್ ಪ್ರಭಾಕರ್ ಹತ್ಯೆ ಪ್ರಕರಣದಲ್ಲಿ ಹರ್ಜೀತ್ ಸಿಂಗ್ ಲಡ್ಡಿ ಕೂಡ ಎನ್‌ಐಎಗೆ ಬೇಕಾಗಿದ್ದಾರೆ.

ಘಟನೆ ಬಳಿಕ, ಕೆನಡಾದ ವಿಧಿವಿಜ್ಞಾನ ತಂಡಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ವಿಡಿಯೋ ಹಾಗೂ ಸ್ಥಳದಲ್ಲಿ ಸಿಕ್ಕ ಬುಲೆಟ್ ಕಾರ್ಟ್ರಿಡ್ಜ್‌ಗಳನ್ನು ಸಂಗ್ರಹಿಸಿದ್ದಾರೆ. ಸಂಭಾವ್ಯ ಗ್ಯಾಂಗ್ ಒಳಗೊಳ್ಳುವಿಕೆ ಅಥವಾ ಬೆದರಿಕೆಯ ಉದ್ದೇಶಿತ ಕೃತ್ಯ ಸೇರಿದಂತೆ ಹಲವಾರು ಆಯಾಮಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೆಫೆಯೇ ಮುಖ್ಯ ಗುರಿಯಾಗಿತ್ತೇ ಅಥವಾ ಕಪಿಲ್ ಶರ್ಮಾಗೆ ಬೆದರಿಕೆ ನೀಡಲು ಈ ಗುಂಡಿನ ದಾಳಿ ನಡೆಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

Category
ಕರಾವಳಿ ತರಂಗಿಣಿ