ಟೆಕ್ಸಾಸ್ : ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ರಣಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 120ಕ್ಕೇರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗೆ ನಡೆಯುತ್ತಿರುವ ಶೋಧ ಕಾರ್ಯ ಇದೀಗ 6ನೇ ದಿನಕ್ಕೆ ಕಾಲಿಟ್ಟಿದೆ. ಅಧಿಕಾರಿಗಳ ಪ್ರಕಾರ, ಸುಮಾರು 170 ಮಂದಿ ನಾಪತ್ತೆಯಾಗಿದ್ದಾರೆ. ಟೆಕ್ಸಾಸ್ ನ ಕೇಂದ್ರ ಭಾಗ ಪ್ರವಾಹದ ಹೊಡೆತಕ್ಕೆ ಸಿಕ್ಕು ನಾಶವಾಗಿರುವುದನ್ನು ಫೋಟೋಗಳಲ್ಲಿ ನೋಡಬಹುದು.
ಬುಧವಾರದ ವೇಳೆಗೆ ಕನಿಷ್ಠ 120 ಮಂದಿ ಸಾವನ್ನಪ್ಪಿರುವುದನ್ನು ಟೆಕ್ಸಾಸ್ ಗವರ್ನರ್ ಕಚೇರಿ ದೃಢಪಡಿಸಿದೆ. ಅವಶೇಷಗಳಡಿ ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಟೆಕ್ಸಾಸ್ ನಲ್ಲಿ ಹರಿಯುವ ಗ್ವಾಡಲೂಪ್ ನದಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದ ಅಪಾಯದ ಮಟ್ಟದಲ್ಲಿ ಹರಿದು ಈ ಅನಾಹುತ ಸಂಭವಿಸಿದೆ ಎಂದು ಕಚೇರಿ ಮಾಹಿತಿ ನೀಡಿದೆ. ರಾಜ್ಯದ ಕೆರ್ ಕೌಂಟಿ ಒಂದರಲ್ಲೇ ಸುಮಾರು 150 ಮಂದಿ ಕಣ್ಮರೆಯಾಗಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನುಳಿದಂತೆ, ಇತರೆ ಭಾಗಗಳಲ್ಲಿ 12ಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಅನುಮಾನವಿದೆ.
ಕಳೆದ ಐದು ದಿನಗಳ ಹಿಂದೆ ಇಲ್ಲಿ ಪ್ರವಾಹ ಸಂಭವಿಸಿತ್ತು. ಇದರ ಪರಿಣಾಮ, ಭಾರೀ ಪ್ರಮಾಣದಲ್ಲಿ ಪ್ರಾಣ ಹಾನಿ ಹಾಗು ನಷ್ಟವಾಗಿದೆ. ಕಳೆದ ಶುಕ್ರವಾರ ಕೆರ್ ಕೌಂಟಿಯ ಹಂಟ್ ಎಂಬಲ್ಲಿ ಗ್ವಾಡಲೂಪ್ ನದಿ ನೀರಿನ ಮಟ್ಟ ಸಾಮನ್ಯಕ್ಕಿಂತ ದಿಢೀರ್ 26 ಅಡಿ ಎತ್ತರದಲ್ಲಿ (ಸುಮಾರು ಎರಡು ಅಂತಸ್ತಿನ ಕಟ್ಟಡದಷ್ಟು) ಹರಿಯುತ್ತಿತ್ತು. ಇದೇ ಮಟ್ಟದಲ್ಲಿ ನದಿ ಸುಮಾರು 45 ನಿಮಿಷಗಳವರೆಗೂ ಹರಿದಿದೆ.