ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಮಹಿಸಾಗರ ನದಿಗೆ ಕಟ್ಟಲಾದ 'ಗಂಭೀರ ಸೇತುವೆ' ಕುಸಿದು ಸಂಚರಿಸುತ್ತಿದ್ದ ಹಲವು ವಾಹನಗಳು ನದಿಗೆ ಬಿದ್ದಿದ್ದವು. ಸೇತುವೆಯ 10ರಿಂದ 15 ಮೀಟರ್ ಉದ್ದದ ಸ್ಲಾಬ್ ಕುಸಿದ ಪರಿಣಾಮ, ಆ ಸಂದರ್ಭದಲ್ಲಿ ಸಾಗುತ್ತಿದ್ದ ವಾಹನಗಳು ನದಿಗೆ ಬಿದ್ದಿದ್ದವು. ಇದರಲ್ಲಿ ಎರಡು ಟ್ರಕ್, ಎರಡು ವ್ಯಾನ್, ಒಂದು ರಿಕ್ಷಾ, ಒಂದು ದ್ವಿಚಕ್ರ ವಾಹನ ನದಿಗೆ ಬಿದ್ದಿದ್ದವು. ಘಟನೆಯಲ್ಲಿ ಗಾಯಗೊಂಡ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ತಿಳಿಸಿದ್ದಾರೆ.
ಘಟನೆ ನಡೆದ ಸಮಯದಿಂದ ಅಗ್ನಿಶಾಮಕ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಬೆಳಗ್ಗೆಯವರೆಗೂ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸಿದರು ಎಂದು ಜಿಲ್ಲಾಧಿಕಾರಿ ಅನಿಲ್ ಧಮೇಲಿಯಾ ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಆದೇಶಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಮೂರು ಮೀಟರ್ ಆಳದ ಹೂಳಿನಲ್ಲಿ ಸಿಲುಕಿರುವ ವಾಹನಗಳು ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮಹಿಸಾಗರ ನದಿಯಲ್ಲಿ ಸುಮಾರು ನಾಲ್ಕು ಕಿಲೋ ಮೀಟರ್ ದೂರದವರೆಗೂ ಶೋಧ ಕಾರ್ಯ ನಡೆಸಿವೆ. ಈವರೆಗೂ 15 ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಕುರಿತು ಮಾಹಿತಿ ಇದ್ದಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 'ಪತ್ತೆಯಾದ ಮೂರು ಮೃತದೇಹಗಳು ಅಪಘಾತದಲ್ಲಿ ಮೃತಪಟ್ಟವರೇ ಅಥವಾ ಬೇರೆ ಇನ್ಯಾವುದೇ ಪ್ರಕರಣದಲ್ಲಿ ಮೃತಪಟ್ಟವೇ ಎಂಬುದು ಎಂಬುದು ತನಿಖೆಯಾಗಬೇಕಿದೆ.