ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಉಂಟಾದ ಮೇಘಸ್ಪೋಟದಿಂದಾಗಿ 72 ಮಂದಿ ಸಾವನ್ನಪ್ಪಿದ್ದಾರೆ. ಸತತವಾಗಿ ಸುರಿದ ಧಾರಾಕಾರ ಮಳೆಗೆ ಸಾಕಾಷ್ಟು ಹಾನಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ತಿಳಿಸಿದರು. ಮಳೆಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಮಂಡಿ ಜಿಲ್ಲೆ ಮಹಾಮರಣದ ಮಳೆಯಿಂದ ನಲುಗಿದ್ದು, ಎಲ್ಲವೂ ನಾಶವಾಗಿದೆ. ಜಲಾವೃತಗೊಂಡ ರಸ್ತೆಗಳು ಮತ್ತು ವಿದ್ಯುತ್ ಸಂಪರ್ಕ ದುರಸ್ತಿಗೆ ಅಲ್ಲಿನ ಸರ್ಕಾರ ಮುಂದಾಗಿದೆ. ಹಿಮಾಚಲ ಪ್ರದೇಶದ ಅಧಿಕಾರಿಗಳು ಮತ್ತು ಸರ್ಕಾರದೊಂದಿಗೆ ಕಾರ್ಮಿಕರು ಸಂಪೂರ್ಣ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂತ್ರಸ್ತರಿಗಾಗಿ ಹಲವು ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಮುಂದುವರೆದಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ರಾಜ್ಯದ 269 ರಸ್ತೆಗಳು, 285 ವಿದ್ಯುತ್ ಟ್ರಾನ್ಸ್ಫರ್ಮರ್ ಹಾನಿಗೊಂಡಿದ್ದು, 278 ನೀರಿನ ಪೂರೈಕೆ ಯೋಜನೆಗಳು ಕಳೆದ 48 ಗಂಟೆಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಮಂಡಿ ಬಳಿ ಕುಲು ಜಿಲ್ಲೆ ಹೆಚ್ಚು ಹಾನಿಗೊಂಡಿದ್ದು, ಬಂಜಾರ್ ಮತ್ತು ನಿರ್ಮದ್‌ನಂತಹ ಉಪವಿಭಾಗಗಳಲ್ಲಿ ಮಳೆಯಿಂದಾಗಿ 39 ರಸ್ತೆಗಳು ಮುಚ್ಚಿಹೋಗಿವೆ. ಭಾರೀ ಮಳೆಯಿಂದಾಗಿ ಭೂಕುಸಿತ, ರಸ್ತೆಗಳು ಜಲಾವೃತ ಮತ್ತು ಮೂಲಸೌಕರ್ಯಗಳಿಗೆ ಅಪಾರ ಹಾನಿ ಉಂಟಾಗಿದೆ. ಅನೇಕ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಮತ್ತು ಅಗತ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಉತ್ತರಾಖಂಡದಲ್ಲಿನ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ತೆಹ್ರಿ, ಉತ್ತರಕಾಶಿ, ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳಿಗೆ ಭೂಕುಸಿತದ ಸಾಧ್ಯತೆ ಇದೆ ಎಂದು ಉತ್ತರಾಖಂಡದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸೂಚನೆ ನೀಡಿದೆ. ಜುಲೈ 7 ಮತ್ತು 8 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಚಮೋಲಿ, ರುದ್ರಪ್ರಯಾಗ, ಉಖಿಮಠ, ಘನ್ಸಾಲಿ, ನರೇಂದ್ರ ನಗರ, ಧನೌಲ್ಟಿ, ದುಂಡಾ ಮತ್ತು ಚಿನ್ಯಾಲಿಸೌರ್ ಸೇರಿದಂತೆ ಹಲವು ಕಡೆ ಭೂ ಕುಸಿತದ ಎಚ್ಚರಿಕೆ ನೀಡಲಾಗಿದೆ. ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳಲ್ಲಿ ಭೂಕುಸಿತದ ಹೆಚ್ಚಿನ ಸಂಭಾವ್ಯ ಹೆಚ್ಚಿದೆ. ಉತ್ತರಕಾಶಿ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿ ಭಾರೀ ಅಥವಾ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.