image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಉದ್ಯಮಿ ಎಲಾನ್ ಮಸ್ಕ್ ನಿಂದ “ಅಮೆರಿಕ ಪಾರ್ಟಿ” ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ

ಉದ್ಯಮಿ ಎಲಾನ್ ಮಸ್ಕ್ ನಿಂದ “ಅಮೆರಿಕ ಪಾರ್ಟಿ” ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ

ಅಮೆರಿಕ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಬೆಂಬಲಿಗ ಉದ್ಯಮಿ ಎಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. "ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನಿಮಗೆ ನೀಡುವ ಉದ್ದೇಶದಿಂದ ಅಮೆರಿಕ ಪಾರ್ಟಿಯನ್ನು ಸ್ಥಾಪಿಸಲಾಗಿದೆ. ನಿಮಗೆ ಹೊಸ ರಾಜಕೀಯ ಪಕ್ಷ ಅಗತ್ಯವಿದೆ. ಖಂಡಿತ ಅದು ಆಗುತ್ತದೆ. ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುತ್ತಿರುವುದನ್ನು ಗಮನಿಸಿದರೆ, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದನಿಸುತ್ತದೆ. ಹೀಗಾಗಿ, ಇಂದು ನಿಮ್ಮ ಸ್ವಾತಂತ್ರ್ಯವನ್ನು ನಿಮಗೆ ಮರಳಿ ನೀಡಲು ಅಮೆರಿಕ ಪಕ್ಷ ಸ್ಥಾಪಿಸಲಾಗಿದೆ" ಎಂದು ಎಕ್ಸ್ ಪೋಸ್ಟ್​ನಲ್ಲಿ ಎಲಾನ್ ಮಸ್ಕ್ ಪ್ರಕಟಿಸಿದ್ದಾರೆ.

ಮಸ್ಕ್ ಎರಡು ತಲೆಯ ಹಾವನ್ನು ತೋರಿಸುವ ಮೀಮ್ ಮತ್ತು "ಏಕಪಕ್ಷ ಆಡಳಿತವನ್ನು ಕೊನೆಗೊಳಿಸಿ" ಎಂಬ ಶೀರ್ಷಿಕೆಯನ್ನು ಸಹ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಪ್‌ಲೋಡ್ ಮಾಡಲಾದ ಸಮೀಕ್ಷೆಯನ್ನು ಮಸ್ಕ್ ಉಲ್ಲೇಖಿಸಿದ್ದಾರೆ. ಎರಡು ಶತಮಾನಗಳಿಂದ ಅಮೆರಿಕದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ದ್ವಿಪಕ್ಷೀಯ ವ್ಯವಸ್ಥೆ (ಕೆಲವರು ಏಕಪಕ್ಷ ಎಂದೂ ಕರೆಯುತ್ತಾರೆ)ಯಿಂದ ಸ್ವಾತಂತ್ರ್ಯ ಬಯಸುತ್ತಿರಾ? ಎಂದು ಕೇಳಿದ್ದರು. ಹೌದು ಅಥವಾ ಇಲ್ಲ ಎಂಬ ಈ ಸಮೀಕ್ಷೆಗೆ 1.2 ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿಕ್ರಿಯೆ ಬಂದಿತ್ತು.

ಹೊಸ ಪಕ್ಷವು 2026ರ ಮಧ್ಯಂತರ ಚುನಾವಣೆಗಳ ಮೇಲೆ ಅಥವಾ ಅದರ ಎರಡು ವರ್ಷಗಳ ನಂತರ ಬರುವ ಅಧ್ಯಕ್ಷೀಯ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕಳೆದ ತಿಂಗಳ ಕೊನೆಯಲ್ಲಿ ಕಾಂಗ್ರೆಸ್‌ನಲ್ಲಿನ ರಿಪಬ್ಲಿಕನ್ನರನ್ನು ತಮ್ಮ ಬೃಹತ್ ದೇಶೀಯ ಕಾರ್ಯಸೂಚಿಯನ್ನು ಜಾರಿಗೆ ತರಲು ಒತ್ತಾಯಿಸಿದಾಗ ಟ್ರಂಪ್-ಮಸ್ಕ್ ನಡುವೆ ಅಸಾಮಾಧಾನ ಭುಗಿಲೆದ್ದಿತ್ತು. "ನಾನು ಈ ಭೂಮಿಯ ಮೇಲೆ ಮಾಡುವ ಕೊನೆಯ ಕೆಲಸವಾಗಿದ್ದರೆ, ಅದು ಮುಂದಿನ ವರ್ಷ ರಿಪಬ್ಲಿಕನ್ನರು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುವುದು" ಎಂದು ಮಸ್ಕ್ ಇತ್ತೀಚೆಗೆ ಹೇಳಿದ್ದರು.

Category
ಕರಾವಳಿ ತರಂಗಿಣಿ