ಬ್ರೆಜಿಲ್ : ನಾಲ್ಕು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ಗೆ ಆಗಮಿಸಿದ್ದಾರೆ. ಶನಿವಾರ ಸಂಜೆ ಗಲಿಯಾವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಇಲ್ಲಿ ಪ್ರಧಾನಿಯವರು 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಅವರ ಐದು ದೇಶಗಳ ಭೇಟಿಯ ನಾಲ್ಕನೇ ಹಂತವಾಗಿದೆ. "ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದೇನೆ, ಅಲ್ಲಿ ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ. ನಂತರ ಅಧ್ಯಕ್ಷ ಲೂಲಾ ಅವರ ಆಹ್ವಾನದ ಮೇರೆಗೆ ರಾಜಧಾನಿ ಬ್ರೆಸಿಲಿಯಾ ಭೇಟಿಗಾಗಿ ತೆರಳುತ್ತೇನೆ. ಈ ಸಮಯದಲ್ಲಿ ಸಭೆಗಳು ಮತ್ತು ಸಂವಾದಗಳನ್ನು ನಿರೀಕ್ಷಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಬ್ರಿಕ್ಸ್ ಸಹಭಾಗಿತ್ವಕ್ಕೆ ಬದ್ಧ! ಪ್ರಧಾನಿ ನರೇಂದ್ರ ಮೋದಿ 17ನೇ ಬ್ರಿಕ್ಸ್ ಶೃಂಗಸಭೆಗಾಗಿ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದಾರೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಅನಿವಾಸಿ ಭಾರತೀಯರು "ಭಾರತ್ ಮಾತಾ ಕಿ ಜೈ" ಘೋಷಣೆಗಳೊಂದಿಗೆ ಸ್ವಾಗತಿಸಿದರು. ನಂತರ ಅವರೊಂದಿಗೆ ಪ್ರಧಾನಿ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೋದಿಗೆ ಭವ್ಯ ಸ್ವಾಗತ ಕೋರಲಾಯಿತು.