ನವದೆಹಲಿ: ಭಾರತೀಯ ಕೈಗಾರಿಕಾ ಒಕ್ಕೂಟ (CII) ಭಾರತದ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಹಾಗೂ ಆರ್ಥಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಲವಾರು ಶಿಫಾರಸುಗಳನ್ನು ಮುಂದಿಟ್ಟಿದೆ. ಸರಕು ಮತ್ತು ಸೇವಾ ತೆರಿಗೆಯನ್ನು (GST) ತರ್ಕಬದ್ಧಗೊಳಿಸುವುದು. ನೇರ ತೆರಿಗೆ ಕಾನೂನುಗಳನ್ನು ಸರಳೀಕರಿಸುವುದು. ದೇಶೀಯ ಉತ್ಪಾದನೆಯನ್ನು ಬೆಂಬಲಿಸಲು ಶ್ರೇಣೀಕೃತ ಕಸ್ಟಮ್ಸ್ ಸುಂಕ ರಚನೆಯನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸುವಂತೆ ಬೇಡಿಕೆ ಮುಂದಿಟ್ಟಿದೆ.
CII ಅಧ್ಯಕ್ಷ ರಾಜೀವ್ ಮೆಮಾನಿ ಅವರು ಜಿಎಸ್‌ಟಿ ದರಗಳನ್ನು ಗಣನೀಯವಾಗಿ ತರ್ಕಬದ್ಧಗೊಳಿಸಲು ಕರೆ ನೀಡಿದ್ದಾರೆ. "ಅಗತ್ಯ ವಸ್ತುಗಳಿಗೆ ರಿಯಾಯಿತಿ ದರ 5 ಪ್ರತಿಶತದಷ್ಟು GST ಇಡುಬೇಕು. ಮತ್ತು ಐಷಾರಾಮಿ ಮತ್ತು ಸಿಮ್ (ತಂಬಾಕು, ಮದ್ಯ) ಸರಕುಗಳಿಗೆ 28 ಪ್ರತಿಶತದಷ್ಟು ಗರಿಷ್ಠ ಜಿಎಸ್‌ಟಿ ದರವನ್ನು ಹಾಗೇಯೇ ಮುಂದುವರೆಸುವುದು ಉತ್ತಮ. ಹಾಗೆಯೇ ಉಳಿದ ಎಲ್ಲಾ ವಸ್ತುಗಳನ್ನು ಒಂದೇ ಪ್ರಮಾಣಿತ ದರಕ್ಕೆ, ಅಂದರೆ 12 ರಿಂದ 18 ಪ್ರತಿಶತದ ನಡುವೆ ತರಬೇಕು" ಎಂದು ಅವರು ಸಲಹೆ ನೀಡಿದ್ದಾರೆ. ಇದರಿಂದಾಗಿ ದೇಶದ ತೆರಿಗೆ ವ್ಯವಸ್ಥೆ ಅಧಿಕ ಸರಳವಾಗುವುದರ ಜತೆಗೆ, ವ್ಯಾಪಾರ ಮಾಡಲು ಸುಲಭವಾಗುತ್ತದೆ ಎಂಬುದು ಮೆಮಾನಿ ಅವರ ವಾದ. ಅಲ್ಲದೇ ಈ ಮೇಲಿನ ಕ್ರಮದಿಂದ ಅಂದರೆ ಜಿಎಸ್‌ಟಿ ದರಗಳನ್ನು ಸರಳೀಕರಿಸಿದರೆ, ಯಾವ ವಸ್ತು ಯಾವ ದರಕ್ಕೆ ಸೇರುತ್ತದೆ ಎಂಬ ಗೊಂದಲ ಕಡಿಮೆಯಾಗುತ್ತದೆ. ಅಲ್ಲದೇ ವ್ಯಾಪಾರಿಗಳು ತೆರಿಗೆ ನಿಯಮಗಳನ್ನು ಪಾಲಿಸಲು ಸುಲಭವಾಗುತ್ತದೆ ಹಾಗೂ ಭವಿಷ್ಯದಲ್ಲಿ ತಮಗೆ ಎಷ್ಟು ತೆರಿಗೆ ಬೀಳಬಹುದು ಎಂದು ಸ್ಪಷ್ಟವಾಗಿ ಊಹಿಸಲು ಸಾಧ್ಯವಾಗುತ್ತದೆ ಎಂದು ಮೆಮಾನಿ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸುತ ಎಲ್ಲ ರಾಜ್ಯಗಳಲ್ಲಿ ಜಿಎಸ್‌ಟಿ ವ್ಯವಸ್ಥೆಯಲ್ಲಿ ವ್ಯಾಪಾರಿಗಳ ಲೆಕ್ಕಪತ್ರಗಳನ್ನು ಪರಿಶೀಲಿಸುವ ವಿಧಾನ ಬೇರೆ ಬೇರೆ ಇರಬಹುದು. ಆದರೆ ಇನ್ನು ಮುಂದೆ ಇವುಗಳೆಲ್ಲವೂ ಒಂದೇ ರೀತಿಯಾಗಿರಬೇಕು. ಇದರಿಂದ ವ್ಯಾಪಾರಿಗಳು ಯಾವುದೇ ರಾಜ್ಯದಲ್ಲಿದ್ದರೂ ಅವರಿಗೆ ತಮ್ಮ ವ್ಯಾಪಾರ ಮಾಡಲು, ಮಾಡಿದರೂ ಅಥವಾ ವ್ಯವಹಾರ ಬೇರೆ ಬೇರೆ ರಾಜ್ಯಗಳಲ್ಲಿ ಇದ್ದರೂ, ಅವರಿಗೆ ನಿಯಮಗಳನ್ನು ಪಾಲಿಸಲು ಸುಲಭವಾಗುತ್ತದೆ. ಜತೆಗೆ ಯಾವುದೇ ಗೊಂದಲಗಳು ಇರುವುದಿಲ್ಲ. ವ್ಯವಸ್ಥೆ ಹೆಚ್ಚು ಸಂಘಟಿತವಾಗಿರುತ್ತದೆ ಎಂಬ ಸಲಹೆಯನ್ನು ಮೆಮಾನಿ ನೀಡಿದ್ದಾರೆ. ನ್ಯಾಷನಲ್ ಅಪೀಲೆಟ್ ಅಥಾರಿಟಿ (National Appellate Authority). ಅಂದರೆ GST ಸಂಬಂಧಿತ ಯಾವುದೇ ವಿವಾದಗಳು ಅಥವಾ ವ್ಯಾಜ್ಯಗಳು ಬಂದಾಗ, ಅವುಗಳನ್ನು ಬಗೆಹರಿಸಲು ಇರುವ ಒಂದು ಉನ್ನತ ಮಟ್ಟದ ನ್ಯಾಯಾಲಯ ಅಥವಾ ಪ್ರಾಧಿಕಾರ. ಇದು ದೀರ್ಘಕಾಲದಿಂದ ರಚನೆಯಾಗಬೇಕಿತ್ತು ಆದರೆ ಆಗಿಲ್ಲ. ಇನ್ನಾದರೂ ಶೀಘ್ರದಲ್ಲಿ ಸ್ಥಾಪಿಸುವಂತೆ CII ಒತ್ತಾಯಿಸಿದೆ. ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳು, ವಿದ್ಯುತ್, ರಿಯಲ್ ಎಸ್ಟೇಟ್ ಜಿಎಸ್‌ಟಿ ಅಡಿಯಲ್ಲಿ/ವ್ಯಾಪ್ತಿಯಲ್ಲಿ ಇಲ್ಲ. ಈ ಕ್ಷೇತ್ರಗಳನ್ನು ಜಿಎಸ್‌ಟಿ ಅಡಿ ತರುವಂತೆ ಭಾರತೀಯ ಕೈಗಾರಿಕಾ ಒಕ್ಕೂಟ ಒತ್ತಾಯಿಸಿದೆ.