ಕೇರಳ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಲಪ್ಪುರಂನ ಮಂಕಡದ 18 ವರ್ಷದ ಯುವತಿ ಸಾವಿಗೆ ನಿಫಾ ಸೋಂಕು ಕಾರಣವಾಗಿದೆ ಎಂಬುದನ್ನು ದೃಢಪಡಿಸಲಾಗಿದೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈರಾಲಜಿ ಲ್ಯಾಬ್ ಪರೀಕ್ಷೆಯಲ್ಲಿ ಆಕೆ ಮಾರಾಣಾಂತಿಕ ನಿಫಾ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಕೇರಳದಲ್ಲಿ ಇತ್ತೀಚೆಗೆ ಕಂಡು ಬಂದ ಹೊಸ ನಿಫಾ ಸೋಂಕು ಇದಾಗಿದೆ. ಸೋಂಕಿಗೆ ಒಳಗಾಗಿದ್ದ ಯುವತಿಯನ್ನು ಜೂನ್ 28 ರಂದು ಕೊಟ್ಟಕ್ಕಲ್‌ನ ಖಾಸಗಿ ಆಸ್ಪತ್ರೆಯಿಂದ ಕೋಯಿಕ್ಕೋಡ್ಗೆ ವರ್ಗಾಯಿಸಲಾಯಿತು. ಆಸ್ಪತ್ರೆಗೆ ಬರುವಾಗಲೇ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲಾಗಿತ್ತು. ಆಕೆ ಜುಲೈ 1ರಂದು ಮೃತಪಟ್ಟಿದ್ದಳು. ಆಕೆಯ ಸೋಂಕಿನ ಮಾದರಿಯನ್ನು ಪುಣೆಯ ವೈರಲಾಜಿ ಸಂಸ್ಥೆಗೆ ಕಳುಹಿಸಲಾಗಿದ್ದು, ಈ ವರದಿ ಫಲಿತಾಂಶ ಇಂದು ಹೊರ ಬರುವ ಸಾಧ್ಯತೆ ಇದೆ.
ಈ ನಡುವೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ಫಾರೆನ್ಸಿಕ್ ವೈದ್ಯರು ಆಕೆ ಸಾವಿಗೆ ನಿಫಾ ಸೋಂಕು ಕಾರಣ ಎಂದಿದ್ದು, ಮುನ್ನೆಚ್ಚರಿಕೆ ಕ್ರಮದಿಂದ ಪ್ರತ್ಯೇಕವಾಗಿ ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಧಿಕೃತ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ನಿಫಾಗೆ 25 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಪಾಲಕ್ಕಾಡ್‌ನ ನಟ್ಟುಕಲ್‌ನ 38 ವರ್ಷದ ಮಹಿಳೆಯೊಬ್ಬರು ಪೆರಿಂಥಲ್ಮನ್ನಾದ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿನಿಂದ ದಾಖಲಾಗಿದ್ದು, ಅವರಿಗೆ ನಡೆಸಲಾದ ಆರಂಭಿಕ ತಪಾಸಣೆಯಲ್ಲಿ ನಿಫಾ ಪಾಸಿಟಿವ್ ಬಂದಿದೆ. ಹೆಚ್ಚಿನ ದೃಢೀಕರಣಕ್ಕೆ ಮಾದರಿಗಳನ್ನು ಪುಣೆ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಸೋಂಕು ಪೀಡಿತ ಜಿಲ್ಲೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಸೋಂಕಿತರ ಸಂಪರ್ಕ ಪತ್ತೆಹಚ್ಚುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಸಾರ್ವಜನಿಕರು ಜಾಗರೂಕರಾಗಿರಬೇಕು. ಆರೋಗ್ಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.