ಟೆಹ್ರಾನ್ : ಇಸ್ರೇಲ್ ಯುದ್ಧ ವಿಮಾನಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಹಗಲು- ರಾತ್ರಿ ಕ್ಷಿಪಣಿ ದಾಳಿ ನಡೆಸುತ್ತಿದ್ದು, ನಗರವು ಅಕ್ಷರಶಃ ಸ್ಫೋಟದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ದಾಳಿಯಲ್ಲಿ ಅಣ್ವಸ್ತ್ರ ತಯಾರಿಕಾ ಘಟಕವೂ ಹಾನಿಗೀಡಾಗಿದೆ. ಇತ್ತ, ಇರಾನ್ ಕೂಡ ತನ್ನ ಪ್ರತಿದಾಳಿಯನ್ನು ಚುರುಕುಗೊಳಿಸಿದ್ದು, ಇಸ್ರೇಲ್ನ ವಸತಿ ಕಟ್ಟಡಗಳು ಹಾನಿಗೀಡಾಗುತ್ತಿವೆ. ಕಳೆದ ಆರು ದಿನಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಇರಾನ್ ಅತ್ಯಧಿಕ ನಷ್ಟ ಅನುಭವಿಸಿದೆ. 239 ನಾಗರಿಕರು ಸೇರಿದಂತೆ 585 ಮಂದಿ ಸಾವಿಗೀಡಾಗಿದ್ದಾರೆ. 1300 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಮೂಲದ ಇರಾನಿನ ಮಾನವ ಹಕ್ಕುಗಳ ಗುಂಪು ಹೇಳಿದೆ.
ಇಸ್ರೇಲ್ನ ನಿಖರ ದಾಳಿಗೆ ಇರಾನ್ ತತ್ತರಿಸಿ ಹೋಗಿದೆ. ಟೆಹ್ರಾನ್ನಲ್ಲಿನ ಜನರು ನಗರ ಬಿಡುವಂತೆ ಸೂಚನೆ ನೀಡಲಾಗಿದೆ. ಕ್ಷಿಪಣಿಗಳು ಕಂಡ ಕಂಡಲ್ಲಿ ಅಪ್ಪಳಿಸಿ ವಿಧ್ವಂಸಕತೆ ಸೃಷ್ಟಿಸುತ್ತಿದ್ದು, ಜನರು ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಸರ್ಕಾರ ಕೂಡ ಸ್ಥಳಾಂತರ ಕಾರ್ಯ ಕೈಗೊಂಡಿದ್ದರೂ, ಜೀವ ಭಯದಲ್ಲಿ ಜನರು ತಾವೇ ಸುರಕ್ಷಿತ ಸ್ಥಳ ಹುಡುಕಿಕೊಂಡು ಪಲಾಯನ ಮಾಡುತ್ತಿದ್ದಾರೆ. ಇದರಿಂದ ನಗರದಿಂದ ಹೊರಹೋಗುವ ರಸ್ತೆಗಳು ಜನರು, ವಾಹನಗಳಿಂದ ಭರ್ತಿಯಾಗಿವೆ. ಇರಾನ್ ನಡೆಸುತ್ತಿರುವ ಪ್ರತೀಕಾರದ ದಾಳಿಯಲ್ಲಿ 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳು ಇಸ್ರೇಲ್ನ ಹಲವು ಪ್ರದೇಶಗಳತ್ತ ಹಾರಿ ಬಂದಿವೆ. ಇದರಲ್ಲಿ ಶೇಕಡಾ 80 ಭಾಗದಷ್ಟು ಕ್ಷಿಪಣಿಗಳನ್ನು ಗಾಳಿಯಲ್ಲೇ ಇಸ್ರೇಲ್ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಆದಾಗ್ಯೂ ತಪ್ಪಿಸಿಕೊಂಡು ಬಂದ ಕ್ಷಿಪಣಿಗಳು, ಡ್ರೋನ್‌ಗಳು ಕನಿಷ್ಠ 24 ಜನರನ್ನು ಕೊಂದು ನೂರಾರು ಜನರನ್ನು ಗಾಯಗೊಳಿಸಿವೆ. ವಸತಿ ಕಟ್ಟಡಗಳಿಗೆ ಅಪ್ಪಳಿಸಿದ್ದು, ಭಾರೀ ಹಾನಿ ಸಂಭವಿಸಿದೆ.
ಇಸ್ರೇಲ್- ಇರಾನ್ ಸಂಘರ್ಷದಲ್ಲಿ ಎಲ್ಲರ ಕಣ್ಣುಗಳು ಈಗ ಅಮೆರಿಕದತ್ತ ನೆಟ್ಟಿವೆ. ಸಂಘರ್ಷ ತೊರೆದು ಶರಣಾಗಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಸರ್ವಾಧಿಕಾರಿ ಅಯಾತೊಲ್ಲಾ ಅಲಿ ಖಮೇನಿ ನಾವು ದಾಳಿಗೆ ಎದುರುವುದಿಲ್ಲ. ಇದು ಮತ್ತಷ್ಟು ತೀವ್ರವಾಗಲಿದೆ. ಇಸ್ರೇಲ್ ಮೇಲೆ ಕರುಣೆ ತೋರುವ ಪ್ರಮೇಯವೇ ಇಲ್ಲ ಎಂದು ಗುಡುಗಿದ್ದಾರೆ. ಇದರಿಂದ ಎರಡು ರಾಷ್ಟ್ರಗಳ ಮಧ್ಯೆ ಪೂರ್ಣ ಯುದ್ಧ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಇದರ ನಡುವೆಯೇ ಅಮೆರಿಕವು ಇಸ್ರೇಲ್ಗೆ ಹೆಚ್ಚಿನ ಯುದ್ಧ ವಿಮಾನಗಳು, ಬಾಂಬ್ಗಳು, ಯುದ್ಧ ನೌಕೆಗಳನ್ನು ರವಾನಿಸಿದೆ.